ದೇಶದ ವಿವಿಧೆಡೆ ಕುಡಿಯುವ ನೀರಿಗೆ ಹಾಹಾಕಾರ

ನವದೆಹಲಿ, ಜೂ. 24-ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಕುಡಿಯುವ ನೀರಿಗೆ ಉದ್ಭವಿಸಿರುವ ಹಾಹಾಕಾರ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿತು.

ನದಿಗಳ ಅಂತರಸಂಪರ್ಕ, ಮಳೆ ನೀರು ಸಂಗ್ರಹ, ಅಂತರ್ಜಲ ಮಟ್ಟ ಸುಧಾರಣೆ ಇತ್ಯಾದಿ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ಸದಸ್ಯರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಸತ್ಯನಾರಾಯಣ್ ಜತಿಯಾ ವಿಷಯ ಪ್ರಸ್ತಾಪಿಸಿ ಮಧ್ಯಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅನೇಕ ಭಾಗಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ ಎಂದರು.

ಮತ್ತೊಬ್ಬ ಬಿಜೆಪಿ ಸದಸ್ಯ ಅಶೋಕ್ ಭಾಜಪೇಯಿ ನೀತಿ ಆಯೋಗವು ಮುಂದಿನ ವರ್ಷ ದೇಶದ ಅನೇಕ ಭಾಗಗಳಲ್ಲಿ ನೀರಿನ ಗಂಭೀರ ಸಮಸ್ಯೆ ಎದುರಾಗಲಿದೆ ಎಂದು ನೀಡಿರುವ ವರದಿಯನ್ನು ಉಲ್ಲೇಖಿಸಿದರು.

ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥ ನಿವಾರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಐದು ದೊಡ್ಡ ನದಿಗಳನ್ನು ಪರಸ್ಪರ ಸಂಪರ್ಕಿಸುವ ಮಹತ್ವದ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಬಿಜೆಪಿ ಸದಸ್ಯರು ಸದನದ ಗಮನಕ್ಕೆ ತಂದರು.

ಸಮಾಜವಾದಿ ಸದಸ್ಯೆ ರೇವತಿ ರಮಣಸಿಂಗ್, ಬಿಜೆಪಿಯ ಸರೋಜ್ ಪಾಂಡೆ ಅವರು ಕೂಡ ಮಾತನಾಡಿ, ಈ ಗಂಭೀರ ಸಮಸ್ಯೆಗೆ ತ್ವರಿತ ಪರಿಹಾರೋಪಗಳನ್ನು ಕಂಡುಕೊಳ್ಳುವುದು ಅಗತ್ಯವಿದೆ. ಮಳೆ ನೀರು ಸಂಗ್ರಹ ಮತ್ತು ಅಂತರ್ಜಲ ಮಟ್ಟ ಸುಧಾರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ಮಾಡಿದರು.

ಸಭಾಪತಿ ಡಾ. ಎಂ. ವೆಂಕಯ್ಯನಾಯ್ಡು ಮಾತನಾಡಿ, ಇದು ಅತ್ಯಂತ ಗಂಭೀರ ವಿಷಯ ಸದಸ್ಯರು ಗಮನ ಸೆಳೆಯುವ ಸೂಚನೆ ನೀಡಿದರೆ. ಈ ಬಗ್ಗೆ ಚರ್ಚೆಗೆ ತಾವೂ ಅವಕಾಶ ನೀಡುವುದಾಗಿ ತಿಳಿಸಿದರು.

ಸದಸ್ಯರು ಪರಸ್ಪರ ಚರ್ಚಿಸಿ ಈ ಬಗ್ಗೆ ಸೂಚನೆ ನೀಡಿದರೆ. ಜಲ ಸಂಕಷ್ಟ ಕುರಿತ ಚರ್ಚೆಗೆ ಕಾಲಾವಕಾಶ ಲಭಿಸಲಿದೆ ಎಂದು ಮೇಲ್ಮನೆ ಸಭಾಪತಿ ಹೇಳಿದರು.

ಕಾಂಗ್ರೆಸ್ ಸದಸ್ಯ ಟಿ.ಸುಬ್ಬರಾಮಿರೆಡ್ಡಿ ಭಾರತದ ಜನಸಂಖ್ಯೆ ಮುಂದಿನ ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಎಂಬ ವರದಿಯನ್ನು ಪ್ರಸ್ತಾಪಿಸಿ ಕುಟುಂಬ ಯೋಜನೆ ಕಾನೂನನ್ನು ಮತ್ತಷ್ಟು ಕಠಿಣಗೊಳಿಸುವಂತೆ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ