ಗ್ವಾಲಿಯರ್, ಜೂ.24- ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಸಮರದಲ್ಲಿ ಭಾರತದ ಜಯಕ್ಕೆ ಜು.25ಕ್ಕೆ 20 ವರ್ಷಗಳು ಪೂರ್ಣವಾಗಲಿದೆ.
ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಕಾರ್ಗಿಲ್ ವಿಜಯ ದಿವಸ್ನನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ.
ಗ್ವಾಲಿಯರ್ ವಾಯು ನೆಲೆ ಇದಕ್ಕಾಗಿ ಯುದ್ಧರಂಗ ಭೂಮಿಯಾಗಿ ಮಾರ್ಪಡಲಿದೆ. ಕಾರ್ಗಿಲ್-ದ್ರಾಸ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡ ಪಾಕಿಸ್ತಾನಿ ಸೇನೆ ಮತ್ತು ಉಗ್ರಗಾಮಿಗಳನ್ನು ಬಡಿದಟ್ಟಲು ನಡೆದ ವಾಯು ಕಾರ್ಯಾಚರಣೆಯ ಅಣಕು ಪ್ರದರ್ಶನಗಳು ಇಲ್ಲಿ ಅನಾವರಣಗೊಳ್ಳಲಿದೆ.
ಜು.25ರಿಂದ ಜು.27ರವರೆಗೆ ಮೂರು ದಿನಗಳ ಕಾಲ ನಡೆಯುವ ಸಮರ ರಂಗಭೂಮಿಯಲ್ಲಿ 5 ಮಿರೇಜ್ 2000, 2 ಮಿಗ್ 21 ಮತ್ತು ಒಂದು ಸುಖೋಯ್-30 ಯುದ್ಧ ವಿಮಾನಗಳು ಯುದ್ಧ ಅಣಕು ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ.
ಟೈಗರ್ ಹಿಲ್ಸ್ನಿಂದ 4 ಉಗ್ರರು ಮತ್ತು ಅವರಿಗೆ ಬೆಂಬಲ ನೀಡಿದ ಪಾಕಿಸ್ತಾನಿ ಯೋಧರನ್ನು ಹೊಡೆದಟ್ಟಲು ನಡೆದ ವಾಯು ಕಾರ್ಯಾಚರಣೆಯ ಮೈಲಿಗಲ್ಲುಗಳು ಇಲ್ಲಿ ಪ್ರದರ್ಶನವಾಗಲಿದೆ.
ಮಿರೇಜ್ 2000 ಯುದ್ಧ ವಿಮಾನವು ಕಾರ್ಗಿಲ್ ಸಮರದಲ್ಲಿ ಬಳಸಿದ ಸ್ಪೈಸ್ ಬಾಂಬ್ ದಾಳಿಯ ಕಾರ್ಯಾಚರಣೆಯು ಇಲ್ಲಿ ಪುನರ್ ಸೃಷ್ಟಿಯಾಗಲಿದೆ. ಇದಕ್ಕಾಗಿ ಕೃತಕ ಪರ್ವತಗಳನ್ನು ಸೃಷ್ಟಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್ನಲ್ಲಿ ನಡೆದ ಉಗ್ರರ ಧ್ವಂಸ ಕಾರ್ಯಾಚರಣೆಯಲ್ಲೂ ಇದೇ ಸಮರ ವಿಮಾನ ಮತ್ತು ಪ್ರಬಲ ಅಸ್ತ್ರವನ್ನು ಬಳಸಲಾಗಿತ್ತು.
ದುರ್ಗಮ ಪರ್ವತ ಸ್ತೋಮದಲ್ಲಿ ನಡೆದ ಭಾರತದ ವಾಯು ಪಡೆಯ ಸಮರ್ಥ ಸೇನಾ ಕಾರ್ಯಾಚರಣೆಗೆ ಸಾಕ್ಷಿಯಾದ ಕಾರ್ಗಿಲ್ ಸಮರದ ಯಶಸ್ಸನ್ನು ವಿಜಯ ದಿವಸವನ್ನಾಗಿ ಆಚರಿಸಲಾಗುತ್ತಿದೆ.