ಬೆಂಗಳೂರು,ಜೂ.24-ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಲಾಂಗ್ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬ ಬ್ಯಾಟರಾಯನಪುರ ಠಾಣೆ ಇನ್ಸ್ಪೆಕ್ಟರ್ ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದಾನೆ.
ಮೂಡಲಪಾಳ್ಯದ ನಿವಾಸಿ ರಾಹುಲ್ ಅಲಿಯಾಸ್ ಗೋವಿಂದ(21) ಗಾಯಗೊಂಡಿರುವ ಆರೋಪಿ.
ಮೊನ್ನೆ ರಾಹುಲ್ ತನ್ನ ಸ್ನೇಹಿತರೊಂದಿಗೆ ಸೇರಿ ಚಾಮರಾಜಪೇಟೆ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಗಳಲ್ಲಿ ತಿರುಗಾಡುತ್ತಾ ದಾರಿಹೋಕರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಹಾಗೂ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ.
ಈ ಬಗ್ಗೆ ಬ್ಯಾಟರಾಯನಪುರ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಬಂಧನಕ್ಕೆ ಚಾಮರಾಜಪೇಟೆ ಠಾಣೆ ಇನ್ಸ್ಪೆಕ್ಟರ್ ಅವರನ್ನೊಳಗೊಂಡ ಒಂದು ತಂಡ ಮತ್ತು ಬ್ಯಾಟರಾಯನಪುರ ಠಾಣೆ ಇನ್ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ನೇತೃತ್ವದಲ್ಲಿ ಮತ್ತೊಂದು ತಂಡವನ್ನು ರಚಿಸಲಾಗಿತ್ತು. ಈ ತಂಡಗಳು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದವು.
ಇಂದು ಬೆಳಗಿನ ಜಾವ 6 ಗಂಟೆ ಸುಮಾರಿನಲ್ಲಿ ಆರೋಪಿ ರಾಹುಲ್ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಚಿಕ್ಕಬಸ್ತಿ ಸಮೀಪದ ರಾಮಸಂದ್ರರಸ್ತೆಯ ನಿರ್ಮಾಣ ಹಂತದ ಮನೆಯ ಬಳಿ ಇರುವ ಬಗ್ಗೆ ಬ್ಯಾಟರಾಯನಪುರ ಠಾಣೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಇನ್ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ಅವರು ಕಾನ್ಸ್ಟೆಬಲ್ ಪ್ರಕಾಶ್, ಇತರ ಸಿಬ್ಬಂದಿಯೊಂದಿಗೆ ರಾಹುಲ್ನನ್ನು ಬಂಧಿಸಲು ಸ್ಥಳಕ್ಕೆ ತೆರಳುತ್ತಿದ್ದಂತೆ ಲಾಂಗ್ನಿಂದ ಪ್ರಕಾಶ್ ಅವರ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಇನ್ಸ್ಪೆಕ್ಟರ್ ವೀರೇಂದ್ರ ಪ್ರಸಾದ್ ಅವರು ಆರೋಪಿಗೆ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಅವರ ಎಚ್ಚರಿಕೆಯನ್ನೂ ಲೆಕ್ಕಿಸದೆ ಮತ್ತೆ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಹಾರಿಸಿದ ಗುಂಡು ಆರೋಪಿ ಎಡಗಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ.
ಆ ಸಂದರ್ಭದಲ್ಲಿ ಪೊಲೀಸರು ಆರೋಪಿ ರಾಹುಲ್ನನ್ನು ಸುತ್ತುವರೆದು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಕಾನ್ಸ್ಟೆಬಲ್ ಪ್ರಕಾಶ್ ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ.
ಆರೋಪಿ ರಾಹುಲ್ ವಿರುದ್ಧ ಬೇಕರಿ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ್ದ ಪ್ರಕರಣ ಸೇರಿದಂತೆ ಚಾಮರಾಜಪೇಟೆ ಮತ್ತು ಬ್ಯಾಟರಾಯನಪುರ ಪೆÇಲೀಸ್ ಠಾಣೆಗಳಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿವೆ.