ಗುಂಪೊಂದರಿಂದ ಭೀಕರವಾಗಿ ಥಳಿಸಿ ಮುಸ್ಲಿಂ ಯುವಕನ ಕೊಲೆ

ಜಾರ್ಖಂಡ್, ಜೂ.24- ಗುಂಪು ದೌರ್ಜನ್ಯದಿಂದ ಸಾವು-ನೋವು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ್ದರೂ, ಹತ್ಯೆ ಪ್ರಕರಣಗಳು ಮುಂದುವರೆದಿವೆ.

ಕಳ್ಳತನದ ಶಂಕೆ ಮೇಲೆ ಮುಸ್ಲಿಂ ಯುವಕನೋರ್ವನಿಗೆ ಗುಂಪೊಂದು ಭೀಕರವಾಗಿ ಥಳಿಸಿ ಕೊಂದಿರುವ ಘಟನೆ ಜಾರ್ಖಂಡ್ ರಾಜ್ಯದ ಖಾರ್ಸಾವಾನ್ ಜಿಲ್ಲೆಯಲ್ಲಿ ನಡೆದಿದೆ. ಜೂ. 18ರಂದು ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತನನ್ನು ತಬ್ರೇಜ್ ಹನ್ಸಾರಿ(24) ಎಂದು ಗುರುತಿಸಲಾಗಿದೆ. ಸುಮಾರು 18 ಗಂಟೆಗಳ ಕಾಲ ಮರಕ್ಕೆ ಕಟ್ಟಿ ಹಾಕಿ ಗುಂಪು ಮಾರಣಾಂತಿಕವಾಗಿ ಥಳಿಸಿ, ನಂತರ ಪೊಲೀಸರ ವಶಕ್ಕೆ ಒಪ್ಪಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಜೂ. 22 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹನ್ಸಾರಿ ಮೃತಪಟ್ಟಿದ್ದಾನೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ವಿಡಿಯೋದಲ್ಲಿ ತಬ್ರೇಜ್‍ಗೆ ಮರದ ತುಂಡಿನಿಂದ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಒಂದು ಗಂಟೆ ಕಾಲ ನಿರಂತರವಾಗಿ ಜೈ ರಾಮ್, ಜೈ ಹನುಮನ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಲಾಗಿದೆ.

ಈ ಘಟನೆ ನಂತರ ಆ ಪ್ರದೇಶದಲ್ಲಿ ಕೋಮು ಗಲಭೆ ಭುಗಿಲೆಳುವ ಸಾಧ್ಯತೆಯಿದ್ದು ವ್ಯಾಪಕ ಬಂದೋಬಸ್ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ