ಬೆಂಗಳೂರು, ಜೂ.24- ಬಹುಕೋಟಿ ವಂಚನೆ ಆರೋಪದ ಐಎಂಎ ಜ್ಯುವೆಲರ್ಸ್ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಶಾಸಕ ಡಾ.ಅಶ್ವಥ್ ನಾರಾಯಣ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದೆ. ಇದರಿಂದ ವಂಚನೆಗೊಳಗಾದವರಿಗೆ ನ್ಯಾಯ ಸಿಗುವ ಸಾಧ್ಯತೆ ಕಡಿಮೆ. ಹಾಗಾಗಿ ಸಿಬಿಐ ತನಿಖೆಗೆ ವಹಿಸುವ ಮೂಲಕ ಜನರಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.
ಪ್ರಭಾವಿಗಳು ಐಎಂಎ ಮುಖ್ಯಸ್ಥ ಮನ್ಸೂರ್ ಜೊತೆ ಗುರುತಿಸಿಕೊಂಡಿದ್ದಾರೆ. ಇಂತಹ ಸರ್ಕಾರ ಹಾಗೂ ಅಧಿಕಾರಿಗಳಿಂದ ನ್ಯಾಯ ಸಿಗುವುದು ಅನುಮಾನ. ಅಮಾಯಕರ ರಕ್ಷಣೆ ಬದಲಾಗಿ ವಂಚಕರ ರಕ್ಷಣೆಯಾಗುತ್ತಿದೆ. ಸಾಕ್ಷ್ಯ ನಾಶ ಮಾಡಲು ಎಸ್ಐಟಿ ರಚನೆಯಾಗಿದೆ ಎಂದು ಆರೋಪಿಸಿದರು.
ಆರ್ಬಿಐ ಪದೇ ಪದೇ ಎಚ್ಚರಿಕೆ ನೀಡಿತ್ತು. ಆದರೆ ಐಎಂಎಯಲ್ಲಿ ತೊಡಗಿಸಿರುವುದು ಷೇರು ಹಣವಲ್ಲ, ಕೇವಲ ಹೂಡಿಕೆಯ ಸ್ಕೀಮ್ ಆಗಿದೆ ಎಂದು ಹೇಳಲಾಗಿತ್ತು.
ಸಿಐಡಿ ಈ ಬಗ್ಗೆ ಕ್ಲೀನ್ ಚಿಟ್ ಸಹ ನೀಡಿತ್ತು. ಕಂದಾಯ ಇಲಾಖೆ ಕ್ರಮ ಕೈಗೊಳ್ಳುವ ಬದಲಿಗೆ ಕಾನೂನು ಇಲಾಖೆಗೆ ವರ್ಗಾಯಿಸಿದೆ. ಇದೆಲ್ಲ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಣುತ್ತಿದೆ. 600 ಕೋಟಿ ರೂ. ಸಾಲ ಪಡೆಯಲು ರಾಜ್ಯ ಸರ್ಕಾರದಿಂದ ಎನ್ಒಸಿ ಪಡೆಯುವ ಪ್ರಯತ್ನವೂ ನಡೆದಿತ್ತು ಎಂದು ದೂರಿದರು.
ಐಎಂಎ ಮಾಲೀಕ ಆದಾಯ ತೆರಿಗೆಯನ್ನು ಪಾವತಿಸಿಲ್ಲ. ಸರ್ಕಾರ ಆರ್ಬಿಐ ನಿರ್ದೇಶನವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಮುಖ್ಯಸ್ಥ ಪ್ರಕಾಶ್, ಕಾನೂನು ವಿಭಾಗದ ವಿವೇಕ್ಸುಬ್ಬಾರೆಡ್ಡಿ, ವಕೀಲ ಶಮದ್ ಮತ್ತಿತರರು ಉಪಸ್ಥಿತರಿದ್ದರು.