ಬೆಂಗಳೂರು, ಜೂ.24- ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ಮಾಡುವುದು ಹಾಗೂ ಕಂಠೀರವ ಕ್ರೀಡಾಂಗಣವನ್ನು ಆ ಸಂಸ್ಥೆಯ ಉಸ್ತುವಾರಿಗೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಕೆ.ಎನ್.ಜಗದೀಶ್ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 5,000ಕ್ಕೂ ಹೆಚ್ಚು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲೊಂಡಿದ್ದರು.
ಲೋಕಾಯುಕ್ತ ವರದಿಯಲ್ಲಿ ಜಿಂದಾಲ್ ಸಂಸ್ಥೆ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದೆ ಎಂದು ಉಲ್ಲೇಖವಾಗಿದೆ. ಆದರೂ ಅಂತಹ ಕಳ್ಳ ಸಂಸ್ಥೆಗೆ ಸರ್ಕಾರ 3667 ಎಕರೆ ಭೂಮಿ ಮಂಜೂರು ಮಾಡುವುದು ಎಷ್ಟು ಸರಿ. ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮೌನಿಯಾಗಿರುವುದು ಏಕೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೇವಲ ಎಚ್.ಕೆ.ಪಾಟೀಲ್ ಅವರು ಮಾತ್ರ ಜಿಂದಾಲ್ ಅಕ್ರಮದ ವಿರುದ್ಧ ದನಿ ಎತ್ತಿದ್ದಾರೆ. ಉಳಿದವರು ಏಕೆ ಸುಮ್ಮನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಜಿಂದಾಲ್ಗೆ ಭೂಮಿ ನೀಡಲೇಬೇಕಾದರೆ ಲೀಜ್ ಮೇಲೆ ನೀಡಲಿ. ರೈತರನ್ನು ಪಾಲುದಾರರನ್ನಾಗಿಸಬೇಕು. ಬರುವ ಲಾಭವನ್ನು ರೈತರಿಗೆ ಹಂಚಬೇಕು. ಭೂಮಿ ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು.
ನಮ್ಮ ಬೇಡಿಕೆಗೆ ಮನ್ನಣೆ ನೀಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಚಂದ್ರಪ್ಪ ಎಚ್ಚರಿಸಿದರು.