ಬೆಂಗಳೂರು, ಜೂ.24- ನಗರದ ಐಎಂಎ ಜುವೆಲ್ಸ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ, ಇಂದು ಶಿವಾಜಿನಗರದಲ್ಲಿನ ಮತ್ತೊಂದು ಮಳಿಗೆಗೆ ತೆರಳಿ ಚಿನ್ನಾಭರಣ ಪರಿಶೀಲನೆ ನಡೆಸಿದೆ.
ಶಿವಾಜಿನಗರದ ಲೇಡಿಕರ್ಜನ್ ರಸ್ತೆಯಲ್ಲಿನ ಪ್ರಮುಖ ಮಳಿಗೆ ಸಮೀಪವಿರುವ ಐಎಂಎ ಗೋಲ್ಡ್ ಎಂಬ ಮಳಿಗೆಯನ್ನು ಎಸ್ಐಟಿ ಅಧಿಕಾರಿಗಳು ತೆರೆದು ಪರಿಶೀಲಿಸಿದ್ದು, 30 ಕೆಜಿಯಷ್ಟು ಚಿನ್ನಾಭರಣವಿರಬಹುದೆಂದು ಅಂದಾಜಿಸಲಾಗಿದೆ.
ಮೊನ್ನೆ ಐಎಂಎ ಜ್ಯುವೆಲ್ಸ್ ಸಂಸ್ಥೆಗೆ ಹಾಕಿದ್ದ ಬೀಗ ಮುದ್ರೆ ತೆರೆದು 20 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ ಜಯನಗರದಲ್ಲಿರುವ ಐಎಂಎ ಮಳಿಗೆಯನ್ನೂ ಸಹ ಪರಿಶೀಲಿಸಿ ಅಲ್ಲೂ ಸಹ ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ಎಸ್ಐಟಿ ವಶಪಡಿಸಿಕೊಂಡಿದೆ.
ಎಸ್ಐಟಿ ಇಂದು ನಡೆಸಿರುವ ಪರಿಶೀಲನೆ ಐಎಂಎಯ ಮೂರನೇ ಮಳಿಗೆಯದ್ದಾಗಿದೆ. ಈ ಮಳಿಗೆಯಲ್ಲಿ ಚಿನ್ನಾಭರಣ ಇರುವುದನ್ನು ಪರಿಶೀಲಿಸಿದ್ದು, ಎಷ್ಟು ಮೌಲ್ಯದ ಆಭರಣಗಳಿವೆ ಎಂಬುದನ್ನು ಲೆಕ್ಕೆ ಹಾಕುತ್ತಿದ್ದಾರೆ. ಸಂಜೆ ವೇಳೆಗೆ ಆಭರಣಗಳ ಮೌಲ್ಯ ಗೊತ್ತಾಗಲಿದೆ.
ಈ ನಡುವೆ ಎಸ್ಐಟಿ ದುಬೈನಲ್ಲಿ ಅಡಗಿರುವ ಆರೋಪಿಯ ಬಂಧನಕ್ಕಾಗಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ನಿನ್ನೆ ಐಎಂಎ ಜ್ಯುವೆಲ್ಸ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ಆಡಿಯೋ ಆಧಾರದ ಮೇಲೆ ತನಿಖಾ ತಂಡ ಐಎಂಎ ಜ್ಯುವೆಲ್ಸ್ ಮಳಿಗೆಗಳ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.