ನವದೆಹಲಿ, ಜೂ.24- ಪರಿಸರ ಸ್ನೇಹಿ ವಿದ್ಯುತ್ ವಾಹನಗಳ ಮೇಲಿನ ತೆರಿಗೆ ಇಳಿಸುವ ವಿಚಾರವನ್ನು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಮಂಡಳಿ ಪರಿಶೀಲಿಸಲಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವರುಣ್ ಗಾಂಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಇಳಿಸಬೇಕೆಂಬುದು ಉತ್ತಮ ಸಲಹೆ. ಸದ್ಯಕ್ಕೆ ಈ ವಿಷಯ ಜಿಎಸ್ಟಿ ಮಂಡಳಿ ಮುಂದಿದೆ ಎಂದರು.
ವಿದ್ಯುತ್ ವಾಹನಗಳ ತೆರಿಗೆ ಕಡಿಮೆ ಮಾಡುವ ಪ್ರಸ್ತಾಪ ಈಗಾಗಲೇ ಜಿಎಸ್ಟಿ ಮಂಡಳಿ ಪರಿಶೀಲಿಸಲಿದೆ ಎಂದು ಠಾಕೂರ್ ತಿಳಿಸಿದರು.
ಇಂಧನಗಳು ತೀವ್ರ ಅಭಾವವಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಪರಿಸರ ಸ್ನೇಹಿ ಇ-ವಾಹನಗಳ ವ್ಯಾಪಕ ಬಳಕೆಗೆ ಉತ್ತೇಜನ ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ತೆರಿಗೆ ಇಳಿಕೆ ಬಗ್ಗೆ ಜಿಎಸ್ಟಿ ಮಂಡಳಿ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದರು.
ಏಕ ರೂಪದ ತೆರಿಗೆ ಪದ್ಧತಿಯಾದ ಜಿಎಸ್ಟಿ ದೇಶಾದ್ಯಂತ ಜಾರಿಗೆ ಬಂದ ನಂತರ ತೆರಿಗೆ ವಿವರ ಸಲ್ಲಿಸುವವರ ಸಂಖ್ಯೆ ಇಮ್ಮಡಿಯಾಗಿದೆ. ಇದು ದೇಶದ ಜನರಿಗೆ ಜಿಎಸ್ಟಿಯ ಬಗ್ಗೆ ಇರುವ ನಂಬಿಕೆ ಮತ್ತು ವಿಶ್ವಾಸವನ್ನು ತೋರಿಸುತ್ತದೆ ಎಂದು ಹೇಳಿದರು.