ಬೆಂಗಳೂರು,ಜೂ.24-ಸಹಕಾರ ಸಂಘಗಳ ಮೂಲಕ ಈ ವರ್ಷ ಸುಮಾರು 10 ಲಕ್ಷ ರೈತರಿಗೆ ಹೊಸ ಸಾಲಕ್ಕಾಗಿ ಅಗತ್ಯ ಆರ್ಥಿಕ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿಂದು ಡಿಸಿಸಿ ಬ್ಯಾಂಕ್ಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್ಗಳಿಂದ ಪಡೆದ ರೈತರ 9 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ಅದರಲ್ಲಿ 18,19,151 ರೈತರ ಮಾಹಿತಿಗಳನ್ನು ಅಪ್ಲೋಡ್ ಮಾಡಲಾಗಿದೆ. ಇನ್ನು 1,30,773 ರೈತರು ತಮ್ಮ ಆಧಾರ್ ಸಂಖ್ಯೆ ಹಾಗೂ ಪಡಿತರ ಚೀಟಿಯ ಮಾಹಿತಿಯನ್ನು ಒದಗಿಸಿಲ್ಲ.
ರೈತರು ವಿಳಂಬ ಮಾಡುತ್ತಿರುವುದೇಕೆ ಎಂಬ ಅಂಶಗಳನ್ನು ಪರಿಶೀಲನೆ ನಡೆಸಲು ಸಹಕಾರ ಇಲಾಖೆಯ ಜಂಟಿ ನಿಬಂಧಕರನ್ನು ನಿಯೋಜಿಸಲಾಗಿದೆ.
ಇವರು ಖುದ್ದಾಗಿ ಡಿಸಿಸಿ ಬ್ಯಾಂಕ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿ ವರದಿ ಕೊಟ್ಟ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
19 ಲಕ್ಷ ರೈತರ ಪೈಕಿ, 16 ಲಕ್ಷ ರೈತರು ಸಾಲ ಮನ್ನಾದ ಸೌಲಭ್ಯ ಪಡೆಯುತ್ತಿದ್ದಾರೆ. ಇವರಿಗಾಗಿ 3,470 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 8 ಲಕ್ಷ ರೈತರ ಖಾತೆಗೆ ಹಣ ಜಮಾ ಆಗಿದೆ. ಉಳಿದ ರೈತರ ಸಾಲ ಮನ್ನಾಕ್ಕೆ ಹಣ ನೀಡಲು 2 ಸಾವಿರ ಕೋಟಿ ರೂ.ಗಳನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕೆಲವು ಬ್ಯಾಂಕ್ಗಳು ಹೊಸ ಸಾಲ ನೀಡಲು ಹಿಂದೇಟು ಹಾಕುತ್ತಿವೆ ಎಂಬ ಮಾಹಿತಿ ಇದೆ. ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್ಗಳ ಮೂಲಕ ಸಾಲ ನೀಡಲು ಈ ವರ್ಷ 10 ಲಕ್ಷ ರೈತರಿಗೆ ತಲಾ 30 ಸಾವಿರದಂತೆ 3 ಸಾವಿರ ಕೋಟಿ ರೂ. ಸಾಲ ನೀಡುವ ನಿರ್ಧಾರ ತೆಗೆದುಕೊಂಡಿದೆ. ಇದರಲ್ಲಿ ಅರ್ಧದಷ್ಟನ್ನು ಸರ್ಕಾರ ಬ್ಯಾಂಕ್ಗಳಿಗೆ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.
ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಬಾಕಿ ಹಣವನ್ನು ಬ್ಯಾಂಕ್ಗಳು ಹೊಂದಿಸಿಕೊಳ್ಳಬೇಕು ಎಂದು ಹೇಳಿದರು.
ಬಡವರ ಬಂಧು ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಈ ವರ್ಷ ಸಾಲ ನೀಡಲು ಸುಮಾರು 8 ಕೋಟಿ ವ್ಯಯಿಸಲು ಉದ್ದೇಶಿಸಲಾಗಿದೆ. ಇದರಡಿ ನಾಲ್ಕೂವರೆ ಲಕ್ಷ ಮಂದಿಗೆ ಅನುಕೂಲ ಕಲ್ಪಿಸುವ ಚಿಂತನೆ ಇದೆ ಎಂದರು.
ಕಳೆದ ವರ್ಷ ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ಸಾಲ ಯೋಜನೆಗೆ 5 ಕೋಟಿ ರೂ. ವ್ಯಯಿಸಲಾಗಿತ್ತು. ಈ ಬಾರಿ ಕೇವಲ ಜಿಲ್ಲಾ ಮಟ್ಟದಲ್ಲಿದ್ದ ಯೋಜನೆಯನ್ನು ತಾಲ್ಲೂಕು ಮಟ್ಟಕ್ಕೂ ವಿಸ್ತರಿಸಲಾಗಿದೆ ಎಂದು ಹೇಳಿದರು.