ಬೆಂಗಳೂರು,ಜೂ.24-ರಾಜ್ಯದಲ್ಲಿ ಸತತ ಬರ ಹಾಗೂ ಮುಂಗಾರು ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸಮಾರೋಪಾದಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ಸಜ್ಜಾಗುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು, ಬರ ಪರಿಹಾರ ಕಾಮಗಾರಿಗಳಿಗೆ ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಜೊತೆಗೆ ಕೆಲ ಜಿಲ್ಲೆಗಳಲ್ಲಿ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಉಂಟಾಗುವ ಅತಿವೃಷ್ಟಿಯ ಆತಂಕವನ್ನು ಎದುರಿಸಲು ಸಜ್ಜಾಗಬೇಕೆಂದು ನಿರ್ದೇಶನ ನೀಡಿದ್ದಾರೆ.
ಹೆಚ್ಚಿನ ಮಳೆಯಾದ ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗದಂತೆ ಜಿಲ್ಲಾಡಳಿತ ಗಮನಹರಿಸಬೇಕು. ಜನಜಾನುವಾರುಗಳ ರಕ್ಷಣೆಯಾಗಬೇಕು.
ಮುಖ್ಯಮಂತ್ರಿಯವರು ಗ್ರಾಮವಾಸ್ತವ್ಯ ನಡೆಸುವ ಮೂಲಕ ಜನರ ಬಳಿಗೆ ಹೋಗುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಇತರೆ ಕಾರ್ಯಕ್ರಮ ಎಂಬಂತೆ ಭಾವಿಸಬಾರದು. ಸಮಸ್ಯೆಗಳನ್ನು ಆಲಿಸಲು ಮುಖ್ಯಮಂತ್ರಿಗಳೇ ಬರಬೇಕೆಂಬ ಭಾವನೆ ಜನರಲ್ಲಿ ಬರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸಲಹೆ ಮಾಡಿದ್ದಾರೆ.
ನಿಮ್ಮ ನಿಮ್ಮ ಜಿಲ್ಲೆಗಳ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ಜನರ ಹಿತ ಕಾಪಾಡಲು ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾದ ಸಂದರ್ಭ ಈಗ ಒದಗಿದೆ. ಈ ನಿಟ್ಟಿನಲ್ಲಿ ಬರ ಪರಿಸ್ಥಿತಿ ಹಾಗೂ ನೆರೆಯ ಹಾವಳಿಯ ಬಗ್ಗೆ ಹೆಚ್ಚಿನ ಗಮನಹರಿಸಿ. ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಡಳಿತಕ್ಕೆ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.