ಲಕ್ನೋ, ಜೂ. 24- ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ತನ್ನ ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಪರಮೋಚ್ಛ ನಾಯಕಿ ಮಾಯಾವತಿ ಸ್ಪಷ್ಟ ಮಾತುಗಳ ಹೇಳುವ ಮೂಲಕ ಸಮಾಜವಾದಿ ಪಕ್ಷದೊಂದಿಗೆ ಮಹಾಮೈತ್ರಿಗೆ ತಿಲಾಂಜಲಿ ನೀಡುವ ಮುನ್ಸೂಚನೆ ಕೊಟ್ಟಿದ್ದಾರೆ.
ಈ ಕುರಿತು ಇಂದು ಹಿಂದಿ ಭಾಷೆಯಲ್ಲಿ ಸರಣಿ ಟ್ವಿಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಮಾಯಾ, ಅಖಿಲೇಶ್ ಯಾದವ್ ನೇತ್ರತ್ವದ ಸಮಾಜವಾದಿ ಪಕ್ಷದ ಧೋರಣೆ ವಿರುದ್ಧ ವಾಗ್ದಾಳಿ ಮುಂದುವರೆಸಿದರು.
ರಾಜ್ಯದ ಜನರ ಹಿತಾಸಕ್ತಿ ದೃಷ್ಟಿಯಿಂದ ಎಸ್‍ಪಿ ಜತೆ ಮೈತ್ರಿ ಮಾಡಿಕೊಳ್ಳಲು ಬಿಎಸ್‍ಪಿ ಮುಂದಾಯಿತು. ಆದರೆ ಇದರಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. 2012ರಿಂದ 17ರ ವರೆಗೆ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಅಖಿಲೇಶ್ ನೇತೃತ್ವದ ರಾಜ್ಯ ಸರ್ಕಾರ ಅನುಸರಿಸಿದ ದಲಿತ ವಿರೋಧಿ ಧೋರಣೆಯೇ ತಮ್ಮ ಪಕ್ಷದ ಸೋಲಿಗೆ ಕಾರಣವಾಯಿತು ಎಂದು ಮಾಯಾ ವಿಶ್ಲೇಷಿಸಿದ್ದಾರೆ.
ಚುನಾವಣಾ ಫಲಿತಾಂಶದ ನಂತರ ಅಖಿಲೇಶ್ ನಡವಳಿಕೆಯೇ ಬದಲಾಗಿದೆ. ಫಲಿತಾಂಶದ ನಂತರ ಸೌಜ್ಯನಕ್ಕಾದರು ತಮಗೆ ಕರೆ ಮಾಡಿ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬಹುದಾಗಿತ್ತು. ಆದರೆ ಅವರ ನಿರ್ಲಕ್ಷ್ಯ ಧೋರಣೆ ಅತೀವ ಬೇಸರ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇತರ ಪಕ್ಷಗಳ ಬೆಂಬಲವಿಲ್ಲದೆ ಬಿಜೆಪಿಯನ್ನು ಎದುರಿಸುವ ಶಕ್ತಿ ಸಮಾಜವಾದಿ ಪಕ್ಷಕ್ಕೆ ಇಲ್ಲ ಎಂದು ಹೇಳಿದ ಅವರು, ಮುಂದಿನ ಎಲ್ಲ ಅದು ಸಣ್ಣ ಅಥವಾ ದೊಡ್ಡ ಚುನಾವಣೆಯಾಗಿರಲಿ ಎಲ್ಲವನ್ನು ಬಿಎಸ್‍ಪಿ ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಮಾಯಾ ಸ್ಪಷ್ಟಪಡಿಸಿದರು.