ಮುಂಗಾರು ಮಳೆಯ ಚೇತರಿಕೆ ಕಾಣುವ ಲಕ್ಷಣಗಳು ಕಂಡುಬರುತ್ತಿಲ್ಲ

ಬೆಂಗಳೂರು, ಜೂ.23-ದುರ್ಬಲಗೊಂಡಿರುವ ಈ ಬಾರಿಯ ಮುಂಗಾರು ಚೇತರಿಕೆ ಕಾಣುವ ಲಕ್ಷಣಗಳು ಕಂಡುಬರುತ್ತಿಲ್ಲ. ಜೂನ್ ಅಂತ್ಯದವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿಲ್ಲ. ಇದುವರೆಗೂ ಶೇ.33ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಕಂಡು ಬರುತ್ತಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.

ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲೂ ಭಾರೀ ಮಳೆಯಾಗುತ್ತಿಲ್ಲ. ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದೆ.

ಇನ್ನೊಂದು ವಾರಗಳ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿಲ್ಲ. ಒಂದೆರಡು ದಿನದ ನಂತರ ಮಳೆ ಬಿಡುವು ಕೊಡುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಜುಲೈ ಮೊದಲ ವಾರದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದ ಅವರು, ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಒಂದೆರಡು ದಿನ ಮಳೆಯಾಗಿದೆ. ವಾಯುಭಾರ ಕುಸಿತ ಈಶಾನ್ಯ ಅಭಿಮುಖವಾಗಿ ಮುಂದುವರೆದಿರುವುದರಿಂದ ರಾಜ್ಯದ ಮೇಲೆ ಅಂತಹ ಪರಿಣಾಮ ಉಂಟಾಗುತ್ತಿಲ್ಲ. ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುಂಗಾರು ಕರ್ನಾಟಕ ಪ್ರವೇಶಿಸಿದೆ ಎಂದು ಪ್ರಕಟಿಸಿದೆ.

ಆದರೂ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಮೇಲ್ಮೈ ಗಾಳಿ ಹಾಗೂ ಮೋಡ ಕವಿದ ವಾತಾವರಣ ಬಹುತೇಕ ಕಡೆ ಕಂಡುಬರುತ್ತಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳಿಗೂ ಒಳಹರಿವು ಹೆಚ್ಚಾಗಿತ್ತು. ಈ ವರ್ಷ ಮುಂಗಾರು ಆರಂಭದಲ್ಲೇ ದುರ್ಬಲಗೊಂಡಿರುವುದರಿಂದ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿರುವುದರಿಂದಲ್ಲದೆ, ಜಲಾಶಯದ ಒಳಹರಿವು ಕೂಡ ಹೆಚ್ಚಾಗಿಲ್ಲ ಎಂದರು.

ಮಳೆ ಅಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಮಾಡುವ ಮೂಲಕ ಮಳೆ ಪ್ರಮಾಣ ಹೆಚ್ಚಿಸುವ ಪ್ರಯತ್ನ ಮಾಡಲಿದೆ. ಮುಂದಿನ ತಿಂಗಳಿನಲ್ಲಿ ಮೋಡ ಬಿತ್ತನೆ ಮಾಡುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ಮೋಡ ಬಿತ್ತನೆ ಮಾಡಲು ಕೇಂದ್ರ ಸರ್ಕಾರದ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ. ಅನುಮತಿ ನೀಡಿದ ಒಂದು ವಾರ ಕಾಲ ಮೋಡ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ಮೋಡ ಬಿತ್ತನೆ ಆರಂಭಿಸುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ