![sadanand](http://kannada.vartamitra.com/wp-content/uploads/2019/01/sadanand-509x381.jpg)
ಬೆಂಗಳೂರು,ಜೂ 23- ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ದರ್ಜೆಯ ಔಷಧಿಗಳು ಜನಸಾಮಾನ್ಯರಿಗೆ ಸಕಾಲಕ್ಕೆ ದೊರೆಯುವಂತೆ ನೋಡಿಕೊಳ್ಳುವ ಮಹತ್ವಾಕಾಂಕ್ಷೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೂರಕ್ಕೂ ಹೆಚ್ಚು ಔಷಧ ಕೇಂದ್ರಗಳು, ಪ್ರತ್ಯೇಕ ಉಗ್ರಾಣಗಳನ್ನು ತೆರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಇಂದಿಲ್ಲಿ ಹೇಳಿದರು.
ನಗರದ ಪೀಣ್ಯಾ ಬಳಿಯ ಬಾಗಲಕುಂಟೆಯಲ್ಲಿ ಪ್ರಧಾನಮಂತ್ರಿ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಜನೌಷಧಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅತೀ ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಬೇಕೆಂಬ ಉದ್ದೇಶ ನಮ್ಮದು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆ, ಗುಣಮಟ್ಟದ ಔಷಧಿಗಳು ದೊರೆಯಬೇಕು. ಹೀಗಾಗಿ ರಾಜ್ಯದಲ್ಲಿ ಮುನ್ನೂರಕ್ಕೂ ಹೆಚ್ಚು ಔಷಧ ಕೇಂದ್ರಗಳು ಮತ್ತು ಜೌಷಧಿಗಳು ಸಕಾಲಕ್ಕೆ ಸಿಗುವಂತೆ ಮಾಡಲು ಉಗ್ರಾಣಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಹಲವೆಡೆ ಜನೌಷಧ ಕೇಂದ್ರಗಳಿಂದ ಸಾಕಷ್ಟು ಬಡರೋಗಿಗಳಿಗೆ ಅನುಕೂಲವಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುತ್ತಿದೆ ಎಂದು ತಿಳಿಸಿದರು.
ಮಧ್ಯಂತರ ಚುನಾವಣೆಗೆ ಅವಕಾಶವಿಲ್ಲ:
ಮಾಜಿ ಪ್ರಧಾನಿ ದೇವೇಗೌಡರು ಮಧ್ಯಂತರ ಚುನಾವಣೆ ನಡೆಯಬಹುದು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ನಡೆದರೆ ಮತ್ತೆ ತೆರಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಜನರ ಮೇಲೆ ತೆರಿಗೆ ಹೆಚ್ಚಿಸಲು ನಾವು ಸಿದ್ಧರಿಲ್ಲ. ಈಗಾಗಲೇ 40 ದಿನ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಮತ್ತೆ ಚುನಾವಣೆಗೆ ಅವಕಾಶ ಕೊಡುವುದಿಲ್ಲ. ಮೈತ್ರಿ ಸರ್ಕಾರ ಪತನವಾಗಿ ಅವಕಾಶ ಸಿಕ್ಕರೆ ನಾವು ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.
ಮೈತ್ರಿ ಸರ್ಕಾರದ ಮೈತ್ರಿ ಪರ್ವ ಪುಸ್ತಕ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಪುಸ್ತಕ ಕೇವಲ ಬೂಟಾಟಿಕೆ ಪುಸ್ತಕ. ಕುರ್ಚಿ ಉಳಿಸುವ ಬಗ್ಗೆ ಬರೆಯುವುದನ್ನು ಬಿಟ್ಟು ಬೇರೆಲ್ಲಾ ಬರೆದಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಮುನಿರಾಜು, ಉಮಾದೇವಿ, ನಾಗರಾಜು, ಲೋಕೇಶ್, ಪಾಲಿಕೆ ಸದಸ್ಯರು, ಸ್ಥಳೀಯ ಮುಖಂಡರು ಹಾಜರಿದ್ದರು.