ಬೆಂಗಳೂರು, ಜೂ.23- ಬದಲಾದ ಜೀವನ ಶೈಲಿ ಮತ್ತು ಒತ್ತಡದ ಬದುಕಿನ ಇಂದಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ನಿವಾರಣೆಗೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿಯನ್ನ ಹೊಂದುವಲ್ಲಿ ಆರೋಗ್ಯ ಶಿಬಿರಗಳ ಸಹಕಾರಿ ಎಂದು ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪಿ.ಲ್.ವೆಂಕಟರಾಮರೆಡ್ಡಿ ತಿಳಿಸಿದರು.
ನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಸ್ವರ್ಣಭಾರತಿ ಬ್ಯಾಂಕಿನ ಸರ್ವಸದಸ್ಯರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಬ್ಯಾಂಕಿನಲ್ಲಿ 8 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ಸದಸ್ಯರಿಗೆ ಆರೋಗ್ಯದ ಮಹತ್ವವನ್ನು ತಿಳಿಸುವ ಹಾಗೂ ಅವರ ಆರೋಗ್ಯದ ಸಮಸ್ಯೆಗಳನ್ನು ಮೂಲದಲ್ಲಿಯೇ ಕಂಡುಹಿಡಿಯುವ ಮೂಲಕ ಉತ್ತಮ ಆರೋಗ್ಯವನ್ನು ನೀಡುವುದು ಈ ಶಿಬಿರದ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಬ್ಯಾಂಕಿನ ಸದಸ್ಯರುಗಳಿಗೆ ಇನ್ನೂ ಹೆಚ್ಚಿನ ಸವಲತ್ತುಗಳನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಕಾಯಿಲೆ ಬರುವ ಮುನ್ನವೇ ಎಚ್ಚರವಹಿಸಿದರೆ ಆಸ್ಪತ್ರೆಗುಳಿಗೆ ಮುಂತಾದ ಕಷ್ಟಗಳಿಂದ ಪಾರಾಗಬಹುದು. ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದರು.
ಶಿಬಿರದಲ್ಲಿ ಪರ್ವ ಡಯಾಗ್ನೊಸ್ಟಿಕ್ ಸೆಂಟರ್‍ನ ವೈದ್ಯರು, ಬ್ಯಾಂಕಿನ ಸಿಇಓ ಕೃಷ್ಣಮೂರ್ತಿ ಸೇರಿದಂತೆ ನಿರ್ದೇಶಕರುಗಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ರೋಗ, ಮಧುಮೇಹ, ರಕ್ತದೊತ್ತಡ, ಇಸಿಜಿ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಮಾಡಲಾಯಿತು.