ವಾಷಿಂಗ್ಟನ್: ಉಗ್ರರಿಗೆ ಆರ್ಥಿಕವಾಗಿ ನೆರವು ನೀಡುತ್ತಿರುವ ಮೂಲಗಳಿಗೆ ಕೂಡಲೇ ಕತ್ತರಿ ಹಾಕಿ ಇಲ್ಲವಾದಲ್ಲಿ ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಸಂಘಟನೆ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆ ನಿಯೋಜಿತ ವಿಶ್ವ ಆರ್ಥಿಕ ಕ್ರಿಯಾಪಡೆ (Financial Action Task Force-FATF)ಪಾಕಿಸ್ತಾನಕ್ಕೆ ಇಂತಹುದೊಂದು ಗಂಭೀರ ಎಚ್ಚರಿಕೆ ನೀಡಿದ್ದು, ಆಕ್ಟೋಬರ್ ಒಳಗೆ ಪಾಕಿಸ್ತಾನ ಉಗ್ರರ ಆರ್ಥಿಕ ನೆರವಿನ ಮೂಲಕ್ಕೆ ಕತ್ತರಿ ಹಾಕದಿದ್ದರೆ, ಪಾಕಿಸ್ತಾನ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು FATF ಎಚ್ಚರಿಕೆ ನೀಡಿದೆ. ಪ್ರಮುಖವಾಗಿ ವಿಶ್ವಸಂಸ್ಥೆ ಜಾಗತಿಕ ಭಯೋತ್ಪದಕ ಪಟ್ಟಿಗೆ ಸೇರಿಸುವ ಮಸೂದ್ ಅಜರ್, ಹಫೀಜ್ ಸಯ್ಯೀದ್ ಸೇರಿದಂತೆ ಹಲವು ಉಗ್ರರು ಈಗಲೂ ಪಾಕಿಸ್ತಾನದಿಂದಲೇ ವ್ಯವಹರಿಸುತ್ತಿದ್ದು, ಕೂಡಲೇ ಇಂತಹ ಉಗ್ರರ ಆರ್ಥಿಕ ಮೂಲವನ್ನು ಕಡಿತಗೊಳಿಸಬೇಕು ಎಂದು FATF ಆಗ್ರಹಿಸಿದೆ.
ಈ ಹಿಂದೆಯೂ ಕೂಡ FATF ಪಾಕಿಸ್ತಾನಕ್ಕೆ ಗಡುವು ನೀಡಿತ್ತು. ಆದರೆ ಈ ಗಡುವು ಮುಕ್ತಾಯಗೊಂಡಿದ್ದು, ಈ ವರೆಗೂ ಪಾಕಿಸ್ತಾನದಿಂದ ಯಾವುದೇ ರೀತಿಯ ಗಂಭೀರ ಕ್ರಮವಾಗಿಲ್ಲ. ಹೀಗಾಗಿ ಈ ಬಾರಿ ಅಕ್ಟೋಬರ್ 2019ರೊಳಗೆ ಕ್ರಮ ಕೈಗೊಳ್ಳದಿದ್ದರೆ, ಆ ದೇಶವನ್ನು ಕಪ್ಪುಪಟ್ಟಿಗೆ ಸೇರಿಸುವುದು ನಿಶ್ಚಿತ ಎಂದು FATF ಎಚ್ಚರಿಕೆ ನೀಡಿದೆ.
ಈ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆಯ ಮೂಲಗಳು ಕೂಡ ಸ್ಪಷ್ಟನೆ ನೀಡಿದ್ದು, FATF ಪಾಕಿಸ್ತಾನಕ್ಕೆ ನೀಡಿರುವ ಎಚ್ಚರಿಕೆಯನ್ನು ಆ ದೇಶ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.