ಬೆಂಗಳೂರು,ಜೂ.22- ಅರಣ್ಯ ಇಲಾಖೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಮ್ಮದೆಂದು ಬಿಂಬಿಸಿಕೊಂಡು ಜಾಗತಿಕ ಮಟ್ಟದ ರೋಲೆಕ್ಸ್ ಪ್ರಶಸ್ತಿ ಪಡೆದಿರುವ ಕೃತಿ ಕಾರಂತ್ ವಿರುದ್ಧ ಅರಣ್ಯ ಇಲಾಖೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅರಣ್ಯ ಇಲಾಖೆ, ನಾವು ಯಾವುದೇ ಸ್ವಯಂಸೇವಾ ಸಂಘದೊಂದಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿಲ್ಲ.
ಇಲಾಖೆಯ ಅಧಿಕಾರಿಗಳೇ ನೇರವಾಗಿ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ವನ್ಯಜೀವಿಗಳ ಮತ್ತು ಮಾನವ ಸಂಘರ್ಷ ತಪ್ಪಿಸಲು ಕಂದಕ ತೋಡಿದ್ದಾನೆ. ಬೇಲಿ ನಿರ್ಮಾಣ ಸೇರಿದಂತೆ ಹಲವಾರು ಕೆಲಸಗಳನ್ನು ಇಲಾಖೆ ಮಾಡುತ್ತಾ ಬಂದಿದೆ.
ವನ್ಯಜೀವ ಸಂಘರ್ಷದಲ್ಲಿ ಪ್ರಾಣಹಾನಿ ಆದವರಿಗೆ, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಇಲಾಖೆಯೇ ನೇರವಾಗಿ ಎಕ್ಸ್ಗ್ರೇಷಿಯಾವನ್ನು ಪಾವತಿಸುತ್ತಿದೆ.ಆದರೆ ಕೆಲವು ಸಂಘಟನೆಗಳು ಅರಣ್ಯ ಗಡಿಭಾಗದ ನಿವಾಸಿಗಳಿಗೆ ವನ್ಯಜೀವಿ ಸಂಘರ್ಷದಿಂದಾದ ನಷ್ಟಕ್ಕೆ ಪರಿಹಾರ ಕೊಡಿಸಲು ಶ್ರಮಿಸಿದ್ದೇವೆ ಎಂದು ಹೇಳಿಕೊಂಡಿವೆ.
ಇಲಾಖೆ ಯಾವುದೇ ರೀತಿಯ ಪರಿಹಾರ ಕೊಡುವುದಿಲ್ಲ. ಎಕ್ಸ್ಗ್ರೇಷಿಯಾ ಮಾತ್ರ ಪಾವತಿಸುತ್ತದೆ. ಇಲಾಖೆಗೆ ಯಾವ ಮಧ್ಯವರ್ತಿಗಳ ಅಗತ್ಯವೂ ಇಲ್ಲ. ನಮ್ಮ ಅಧಿಕಾರಿಗಳು ನೇರವಾಗಿ ಸಾರ್ವಜನಿಕರೊಂದಿಗೆ ಸಂಪರ್ಕವಿಟ್ಟುಕೊಂಡು ಫಲಾನುಭವಿಗಳಿಗೆ ಆರ್ಥಿಕ ಸೌಲಭ್ಯವನ್ನು ಕಲ್ಪಿಸುತ್ತಾರೆ ಎಂದು ಹೇಳಿದೆ.
ಆದರೆ ವನ್ಯಜೀವಿ ಹೋರಾಟಗಾರ ಕೆ.ಉಲ್ಲಾಸ್ ಕಾರಂತ್ ಅವರ ಪುತ್ರಿ ಕೃತಿ ಕಾರಂತ್ ಅವರು ಬಂಡಿಪುರ ಮತ್ತು ನಾಗರಹೊಳೆ ಅರಣ್ಯ ಗಡಿಭಾಗದಲ್ಲಿ ಹಳ್ಳಿಗರಿಗೆ ನೆರವಾಗಿರುವುದಾಗಿ ಹೇಳಿಕೊಂಡು ಸುಮಾರು 1.6 ಕೊಟಿ ಮೌಲ್ಯದ ಅಂತಾರಾಷ್ಟ್ರೀಯ ಮಟ್ಟದ ರೋಲೆಕ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪಗಳಿವೆ.
ರೋಲೆಕ್ಸ್ ಸಂಸ್ಥೆ ಜೀವವೈವಿದ್ಯತೆ, ಪ್ರಕೃತಿ ಸಂಪತ್ತು ರಕ್ಷಣೆ ಮಾಡುವ ಸಾಧಕರನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ನೀಡುತ್ತದೆ. ಈ ಬಾರಿ 2019ರ ಪ್ರಶಸ್ತಿಗೆ ವಿಶ್ವದಾದ್ಯಂತ 5 ಮಂದಿಯನ್ನು ಗುರುತಿಸಲಾಗಿದ್ದು, ಅದರಲ್ಲಿ ಕೃತಿ ಕಾರಂತ್ ಕೂಡ ಒಬ್ಬರು. ಕೃತಿ ಕಾರಂತ್ ನಾಗರಹೊಳೆ ಮತ್ತು ಬಂಡೀಪುರ ಅರಣ್ಯಪ್ರದೇಶದಲ್ಲಿ ಸುಮಾರು 600 ಹಳ್ಳಿಗಳ 6,400 ಜನರು ಸುಮಾರು 14 ಸಾವಿರ ಪ್ರಕರಣಗಳಲ್ಲಿ ಸುಮಾರು 20 ಲಕ್ಷ ಡಾಲರ್ ಪರಿಹಾರ ಪಡೆದುಕೊಳ್ಳಲು ನೆರವಾಗಿದ್ದಾರೆ ಎಂದು ಪ್ರಶಸ್ತಿ ನೀಡಿರುವ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಆದರೆ ಅರಣ್ಯ ಇಲಾಖೆ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಯಾವ ಮಧ್ಯವರ್ತಿಗಳ ಮೂಲಕ ಆರ್ಥಿಕ ನೆರವು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.