ಬೆಂಗಳೂರು, ಜೂ.22- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ತಿಳಿಸಿದ್ದಾರೆ.
ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಪುತ್ಥಳಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಭಾರತ ನಗರಾಭಿವೃದ್ಧಿ ಟ್ರಸ್ಟ್ ಹಾಗೂ ಕೃಷಿಕ ಸಾಹಿತ್ಯ ಪರಿಷತ್ತು ವತಿಯಿಂದ ಕಸಾಪದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಇತಿಹಾಸ ಮತ್ತು ಐತಿಹಾಸಿಕ ಬಗ್ಗೆ ವಿಚಾರ ಸಂಕಿರಣ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾಡಿಗೆ ಅಪಾರ ಕೊಡುಗೆ ನೀಡಿದ ನಾಡಪ್ರಭು ಕೆಂಪೇಗೌಡರ ಪುರಾವೆಗಳು, ದಾಖಲೆಗಳ ಸಂರಕ್ಷಣೆಯಾಗಬೇಕು ಎಂದ ಸಚಿವರು, ಅಂದಿನ ಕಾಲದಲ್ಲೇ ಕೆಂಪೇಗೌಡರು ಸ್ಮಾರ್ಟ್ ಸಿಟಿ ಯೋಜನೆ ಕಲ್ಪನೆಯ ಕನಸು ಕಂಡಿದ್ದರು. ಕೇವಲ ಅವರು ಆಡಳಿತ ಮಾಡಲಿಲ್ಲ, ಜನರಿಗಾಗಿ, ನಾಡಿಗಾಗಿ ತಮ್ಮ ಕುಟುಂಬವನ್ನೇ ಅರ್ಪಿಸಿದರು ಎಂದು ಸ್ಮರಿಸಿದರು.
ಕೆಂಪೇಗೌಡರ ವಂಶಸ್ಥರ ಚರಿತ್ರೆ, ಸಾಧನೆಗಳ ಬಗ್ಗೆ ಅಧ್ಯಾಯಾನ, ಸಂಶೋಧನೆಗಳು ನಡೆಯಬೇಕು.ತಮ್ಮ ಇಡೀ ಬದಕನ್ನೇ ಮುಡುಪಾಗಿಟ್ಟವರ ಸಾಧನೆಗಳ ಬಗ್ಗೆ ಯುವ ಪೀಳಿಗಿಗೆ ತಿಳಿಯಾಬೇಕು ಎಂದು ಅವರು ಸಲಹೆ ನೀಡಿದರು.
ಇತಿಹಾಸಕರರು ಸಂಶೋಧನೆ ಮಾಡಿ ನೀಡಿದ ದಾಖಲೆಗಳ ಆಧಾರದ ಮೇಲೆ ಸಾಹಿತಿಗಳು ಕೃತಿ ರಚಿಸಿದರೆ ಒಳಿತು. ರಾಜ್ಯಕ್ಕೆ ನಾಡಪ್ರಭು ಕೆಂಪೇಗೌಡ ರಾಜವಂಶಸ್ಥರ ಕೊಡುಗೆಗಳ ಬಗ್ಗೆ ಸಂಶೋಧನೆಗಳು, ಅಧ್ಯಯನಗಳು ನಡೆಯಬೇಕಿದೆ ಎಂದು ಸದಾನಂದಗೌಡರು ಒತ್ತಾಯಸಿದರು.
ಕೆಂಪೇಗೌಡರು ಗ್ರಾಮೀಣ ಪ್ರದೇಶಗಳಲ್ಲಿ ಕೋಟೆಗಳು ಕಟ್ಟುವ ಮೂಲಕ ನಗರೀಕರಣ ಮಾಡಿದವರು. ಇದರಲ್ಲಿ ಧನ-ಕನಕಗಳನ್ನು ಕ್ರೂಢೀಕರಿಸಿ ಕರ್ನಾಟಕ ನಾಡು ಸಂಪತ್ತು ಭರಿತವಾಗಿ ಬೆಳೆಯುವಂತೆ ಮಾಡಿದವರು ಎಂದು ಡಾ.ಬೂದನೂರು ಪುಟ್ಟಸ್ವಾಮಿ ಹೇಳಿದರು.
ಕೇಂದ್ರ ಸರ್ಕಾರ ಪ್ರಾಚೀನ ತಾಣಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕೆಂದು ಇದೇ ವೇಳೆ ಅವರು ಮನವಿ ಮಾಡಿದರು.
ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಇತಿಹಾಸ ತಜ್ಞರಾದ ಪ್ರೊ.ಎಂ.ವಿ.ಶ್ರೀನಿವಾಸ್, ಪಿ.ವಿ.ನಂಜರಾಜ ಅರಸ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ಜಯಪ್ರಕಾಶರಗೌಡ, ಜಯರಾಮ ರಾಯಪುರ, ಡಾ.ಆರ್.ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.