ಬೆಂಗಳೂರು, ಜೂ.22- ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದರ ಹಿಂದೆ ಕೇಂದ್ರ ನಾಯಕರ ಭಾರೀ ದೂರದೃಷ್ಟಿ ಅಡಗಿದೆ ಎನ್ನಲಾಗುತ್ತಿದೆ.
ಮೊದಲನೆಯದಾಗಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡರೆ ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ಗೆ ಇನ್ನೊಂದು ಆಘಾತ ನೀಡುವುದು.
ಎರಡನೇಯದಾಗಿ ವರ್ಷಾಂತ್ಯಕ್ಕೆ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಕರ್ನಾಟಕದಿಂದ ಈ ಮೂರು ರಾಜ್ಯಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಸಂಪನ್ಮೂಲ ಸಿಗದಂತೆ ನೋಡಿಕೊಳ್ಳುವುದು.
ಮೂರನೆಯದಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವನ್ನು ವಿಲನ್ ರೀತಿ ಬಿಂಬಿಸಿ ಸರ್ಕಾರ ಪತನವಾಗಲು ಅವರೇ ಕಾರಣ ಎಂಬ ಹಣೆಪಟ್ಟಿ ಕಟ್ಟುವ ಲೆಕ್ಕಾಚಾರ ಬಿಜೆಪಿಯಲ್ಲಿದೆ.
ಹೀಗಾಗಿ ಈವರೆಗೂ ಆಪರೇಷನ್ ಕಮಲಕ್ಕೆ ನೋ ನೋ ಎನ್ನುತ್ತಿದ್ದ ಕೇಂದ್ರ ಬಿಜೆಪಿ ವರಿಷ್ಠರು ಸರ್ಕಾರವನ್ನು ಪತನಗೊಳಿಸಲು ತೆರೆಮರೆಯಲ್ಲಿ ರಾಜ್ಯ ನಾಯಕರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ಗೆ ಈ ವರ್ಷದ ಅಕ್ಟೋಬರ್ ನಂತರ ನಡೆಯಲಿರುವ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ಅತ್ಯಂತ ಮಹತ್ವದ್ದೆನಿಸಿದೆ.
ವಿಶೇಷವೆಂದರೆ ಮೂರು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು, ಪುನಃ ಅಧಿಕಾರ ಪಡೆಯಲು ಕಮಲ ಪಡೆ ತನ್ನದೇ ಆದ ರಣತಂತ್ರ ರೂಪಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಈ ಮೂರು ರಾಜ್ಯಗಳಲ್ಲೂ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು.
ಸಂಪನ್ಮೂಲ ಕ್ರೂಢೀಕರಣಕ್ಕೆ ಬ್ರೇಕ್:
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಮುಂದುವರೆದರೆ, ನೆರೆಯ ರಾಜ್ಯ ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ಸಾಕಷ್ಟು ಸಂಪನ್ಮೂಲ ಹರಿದು ಹೋಗುತ್ತದೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಗೆ ಕರ್ನಾಟಕದಿಂದ ಯಾವುದೇ ರೀತಿಯ ಆರ್ಥಿಕ ನೆರವು ಸಿಗದಂತೆ ನೋಡಿಕೊಂಡರೆ ಅರ್ಧ ಚುನಾವಣೆ ಗೆದ್ದಂತೆ ಎಂಬುದು ಬಿಜೆಪಿ ಲೆಕ್ಕಾಚಾರ.
ಹರಿಯಾಣದಲ್ಲಿ ಕಾಂಗ್ರೆಸ್ಗೆ ಪಂಜಾಬ್ನಿಂದ ನೆರವು ಸಿಗಬಹುದು. ಆದರೆ, ಅತಿದೊಡ್ಡ ರಾಜ್ಯವಾದ ಮಹಾರಾಷ್ಟ್ರಕ್ಕೆ ನೆರವು ಬಂದ್ ಮಾಡಿದರೆ ಪುನಃ ಗೆಲ್ಲಬಹುದೆಂಬ ದೂರದೃಷ್ಟಿಯಿಂದಲೇ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ.
ಮೊದಲಿನಿಂದಲೂ ಮಹಾರಾಷ್ಟ್ರಕ್ಕೂ ಕರ್ನಾಟಕಕ್ಕೂ ಅವಿನಾಭವಾವ ಸಂಬಂಧವಿದೆ. ಮುಂಬೈನಲ್ಲಿ ಸಾಕಷ್ಟು ಉದ್ಯಮಿಗಳು ಬಂಡವಾಳ ಹೂಡಿದ್ದಾರೆ.ಅಲ್ಲದೆ, ಇಲ್ಲಿನ ಅನೇಕ ರಾಜಕಾರಣಿಗಳು ಒಡನಾಟವನ್ನು ಇಟ್ಟುಕೊಂಡಿದ್ದಾರೆ.
ಸರ್ಕಾರ ಅಸ್ಥಿರವಾದರೆ ಮಹಾರಾಷ್ಟ್ರಕ್ಕೆ ಹೋಗುವ ಆರ್ಥಿಕ ನೆರವು ಸಹಜವಾಗಿ ನಿಂತು ಹೋಗುತ್ತದೆ. ಇದೆಲ್ಲವನ್ನು ಲೆಕ್ಕ ಹಾಕಿಯೇ ರಾಜ್ಯ ನಾಯಕರಿಗೆ ಅನ್ಯಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ.
ಸಿದ್ದರಾಮಯ್ಯ ತಲೆಗೆ:
ಇನ್ನು ಸಮ್ಮಿಶ್ರ ಸರ್ಕಾರದ ವಿರುದ್ಧ ಒಳಗೊಳಗೆ ಕುದಿಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಸರ್ಕಾರ ಪತನವಾಯಿತು ಎಂದು ಬಿಂಬಿಸಲೂ ಕೂಡ ಬಿಜೆಪಿ ಅಣಿಯಾಗಿದೆ.
ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರನ್ನು ಭೇಟಿಯಾಗಿರುವ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಸಾಕಷ್ಟು ದೂರುಗಳನ್ನು ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಲಾಗಲು ಜೆಡಿಎಸ್ ಜತೆ ಮೈತ್ರಿಯೇ ಕಾರಣ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಇದೀಗ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೂಡ ಸಿದ್ದರಾಮಯ್ಯನವರು ತಾಳ್ಮೆಯಿಂದ ವರ್ತಿಸಬೇಕು.ಸರ್ಕಾರ ಸುಸೂತ್ರವಾಗಿ ನಡೆಯಲು ಅವರ ಪಾತ್ರವೂ ಪ್ರಮುಖ ಎಂಬುದನ್ನು ನಿನ್ನೆಯಷ್ಟೇ ಹೇಳಿದ್ದರು.
ಬಹುತೇಕ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಈಗಲೂ ಕೂಡ ಅವರನ್ನೇ ಮುಖ್ಯಮಂತ್ರಿ ಎಂದು ಹೇಳುತ್ತಲೇ ಸಿಎಂ ಕುಮಾರಸ್ವಾಮಿಗೆ ಮುಜುಗರ ತರುತ್ತಿದ್ದಾರೆ. ಮುಂದೊಂದು ದಿನ ಸರ್ಕಾರ ಪತನವಾದರೆ ಇದನ್ನು ಸಿದ್ದರಾಮಯ್ಯನವರ ತಲೆಗೆ ಕಟ್ಟಲು ಚಿಂತನ-ಮಂಥನ ನಡೆದಿದೆ.
ಒಟ್ಟಿನಲ್ಲಿ ಕರ್ನಾಟಕದಲ್ಲಿರುವ ದೋಸ್ತಿ ಸರ್ಕಾರವನ್ನು ಪತನಗೊಳಿಸಿದರೆ ಕಾಂಗ್ರೆಸ್ಗೆ ಇಡೀ ದಕ್ಷಿಣ ಭಾರತದ ಬಾಗಿಲು ಬಂದಾಗುತ್ತದೆ ಎಂಬುದನ್ನು ಮನಗಂಡೇ ಬಿಜೆಪಿ ಚಿಂತಕರ ಛಾವಡಿ ಒಳಗೊಳಗೆ ಲೆಕ್ಕಾಚಾರ ಹಾಕಿಕೊಂಡಿದೆ.