ಕಲಬುರಗಿ: ಅಫ್ಜಲ್ಪುರದ ಹೇರೂರ (ಬಿ) ಗ್ರಾಮದಲ್ಲಿ ಶನಿವಾರ ನಡೆಯಬೇಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಭಾರೀ ಮಳೆಯ ಕಾರಣ ಮುಂದೂಡಿಕೆಯಾಗಿದೆ.
ಸಿಎಂ ಅವರು ಈ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಭಾರೀ ಮಳೆಯಾಗಿರುವುದು ನನಗೆ ಹರ್ಷ ತಂದಿದೆ. ಕಾರ್ಯಕ್ರಮ ರದ್ದಾಗಿಲ್ಲ, ಮಳೆಗಾಲದ ಅಧಿವೇಶನ ನಡೆಯುವುದಿದೆ, ಆ ಬಳಿಕ ಕಾರ್ಯಕ್ರಮವನ್ನು ಆಯೋಜಿಸಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಶುಕ್ರವಾರ ಸಂಜೆಯಿಂದ ಹೆರೂರ (ಬಿ) ಗ್ರಾಮದಲ್ಲಿ ಭಾರೀ ಮಳೆ ಸುರಿದಿದೆ. ಸಿಎಂ ಸಮಾರಂಭ ನಡೆಯಬೇಕಾಗಿದ್ದ ಮೈದಾನದಲ್ಲಿ ಅಪಾರ ಪ್ರಮಾಣದ ನೀರು ತುಂಬಿಕೊಂಡಿರುವ ಹಿನ್ನಲೆಯಲ್ಲಿ ಕಾರ್ಯಕ್ರಮ ನಡೆಸುವುದು ಅಸಾಧ್ಯವಾಗಿದೆ.
ಚಂಡರಕಿ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳ ಬಳಿಕ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಊಟ ಮಾಡಿದರು. ಶಾಲೆಯ ಕೋಣೆಯಲ್ಲೇ ಮಲಗಿದರು. ಫ್ಯಾನ್ ಅಳವಡಿಸಿದ್ದನ್ನು ಬಿಟ್ಟರೆ ಆಧುನಿಕ ಸೌಲಭ್ಯಗಳಿರಲಿಲ್ಲ. ಚಾಪೆ ಹಾಗೂ ದಿಂಬಿ ನೊಂದಿಗೆ ಮಲಗಿದರು.