ಹೈದರಬಾದ್: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ತನ್ನ ಚಿಕ್ಕಪ್ಪ ಹಾಗೂ ವೈಎಸ್ಆರ್ಸಿಪಿ ಮುಖಂಡ ವೈ.ವಿ.ಸುಬ್ಬಾ ರೆಡ್ಡಿ ಅವರನ್ನು ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಂ) ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.
ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಮನಮೋಹನ್ ಸಿಂಗ್ ಅವರು ಸಿಎಂ ಆದೇಶದಂತೆ ಸುಬ್ಬಾ ರೆಡ್ಡಿ ಅವರಿಗೆ ಟಿಟಿಡಿ ಮಂಡಳಿಯ ಮುಖ್ಯಸ್ಥ ಸ್ಥಾನ ನೀಡಿದ್ದಾರೆ.
ಸುಬ್ಬಾ ರೆಡ್ಡಿ ವೈಎಸ್ಆರ್ಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜೊತೆಗೆ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಹತ್ತಿರದ ಸಂಬಂಧಿಯೂ ಆಗಿದ್ದಾರೆ. ಈಗ ಟಿಟಿಡಿ ಮುಖ್ಯಸ್ಥರಾಗಿ ಜೂನ್ 22 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಟಿಟಿಡಿ ಮಂಡಳಿಗೆ ಇನ್ನಷ್ಟು ಸದಸ್ಯರು ಶೀಘ್ರದಲ್ಲೇ ನೇಮಕಗೊಳ್ಳಲಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿಂಗ್ ತಿಳಿಸಿದ್ದಾರೆ.
ಟಿಡಿಪಿ ನಾಯಕ ಪುಟ್ಟ ಸುಧಾಕರ್ ಯಾದವ್ ಟಿಟಿಡಿ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಗುರುವಾರ ತಮ್ಮ ರಾಜೀನಾಮೆ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ, ಟಿಟಿಡಿ ಮಂಡಳಿಯ 10 ಮಂದಿ ಸದಸ್ಯರು ತಾವಾಗಿಯೇ ಟ್ರಸ್ಟ್ನಿಂದ ಹೊರಬಂದಿದ್ದರು.