ಮೈತ್ರಿ ಸರ್ಕಾರದ ಪತನಕ್ಕೆ ವೇದಿಕೆ ಸಿದ್ಧಪಡಿಸಿದ್ದ ಅತೃಪ್ತ ಶಾಸಕರು-ಕೊನೆ ಕ್ಷಣದಲ್ಲಿ ಕೈ ಕೊಡಬಹುದು?

ಬೆಂಗಳೂರು,ಜೂ.21- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ವೇದಿಕೆ ಸಿದ್ದಪಡಿಸಿದ್ದ ಕಾಂಗ್ರೆಸ್‍ನ ಕೆಲವು ಅತೃಪ್ತ ಶಾಸಕರೇ ಕೊನೆ ಕ್ಷಣದಲ್ಲಿ ಕೈಕೊಟ್ಟರೇ…? ಎಂಬ ಅನುಮಾನ ಕಾಡಲಾರಂಭಿಸಿದೆ.

ಆಪರೇಷನ್ ಕಮಲಕ್ಕೆ ಎಲ್ಲ ರೀತಿಯ ವೇದಿಕೆಗಳನ್ನು ಸಿದ್ದಪಡಿಸುವ ಜವಾಬ್ದಾರಿಯನ್ನು ಕಾಂಗ್ರೆಸ್‍ನ ಶಾಸಕರೊಬ್ಬರು ವಹಿಸಿಕೊಂಡಿದ್ದರು ಎಂಬುದು ಗೌಪ್ಯವಾಗಿ ಉಳಿದಿಲ್ಲ.

ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ಸಂಪರ್ಕಿಸುವುದು, ರಾಜೀನಾಮೆ ನೀಡುವ ಮುನ್ನ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸುವುದು, ಸೂಕ್ತ ಸಮಯದಲ್ಲಿ ಕರೆತಂದು ರಾಜೀನಾಮೆ ಕೊಡಿಸುವುದು ಮತ್ತು ಯಾರಿಗೆಲ್ಲ ಸಚಿವ ಸ್ಥಾನ ಕೊಡಿಸಬೇಕೆಂಬ ಮಾತುಕತೆ ನಡೆಸುವುದು ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಕಾಂಗ್ರೆಸ್‍ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರೊಬ್ಬರು ವಹಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ನಿನ್ನೆ ದಿಢೀರ್ ಬೆಳವಣಿಗೆಗಳಲ್ಲಿ ಒಂದಿಷ್ಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಅಂತಿಮ ಹಂತದ ಮಾತುಕತೆ ನಡೆದಿತ್ತು. ಇದರ ಸುಳಿವು ಅರಿತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡಲೇ ನೇತೃತ್ವ ವಹಿಸಿದ್ದ ಶಾಸಕರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸಿದ್ದರು ಎನ್ನಲಾಗಿದೆ.

ಗ್ರಾಮವಾಸ್ತವ್ಯಕ್ಕೆ ತೆರಳುವ ಮುನ್ನ ಕುಮಾರಸ್ವಾಮಿಯವರು ಶಾಸಕರಿಗೆ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿಯೊಂದನ್ನು ವಹಿಸಿದ್ದರು.ಇದರಿಂದ ಸಮಾಧಾನಗೊಂಡಿದ್ದ ಅವರು, ತಮ್ಮ ಭಿನ್ನಮತ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದರು ಎಂದು ಹೇಳಲಾಗಿದೆ.

ಹೀಗಾಗಿ ಕೊನೆ ಕ್ಷಣದಲ್ಲಿ ಬಿಜೆಪಿ ನಾಯಕರು ಚಕಿತಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಶಾಸಕರಷ್ಟೇ ಅಲ್ಲದೆ ಬೇರೆ ಕಾಂಗ್ರೆಸ್ ಶಾಸಕರ ಮೂಲಕವೂ ಆಪರೇಷನ್ ಕಮಲವನ್ನು ಚಾಲ್ತಿಯಲ್ಲಿಟ್ಟಿದೆ ಎಂಬ ಮಾತುಗಳು ಕೇಳಿಬಂದಿವೆ.

ಎಲ್ಲ ರಾಜಕೀಯ ಕುತೂಹಲಗಳಿಗೆ ಈ ತಿಂಗಳ ಅಂತ್ಯದಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ