ಬೆಂಗಳೂರು, ಜೂ.21- ಸರ್ವೋಚ್ಚ ನ್ಯಾಯಾಲಯ ದಕ್ಷಿಣ ಭಾರತ ಸಂಚಾರಿ ಪೀಠ ಸ್ಥಾಪನಾ ಕ್ರಿಯಾ ಸಮಿತಿ ವತಿಯಿಂದ ಸರ್ವೋಚ್ಚ ನ್ಯಾಯಾಲಯದ ಒಂದು ಸಂಚಾರಿ ಪೀಠವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ನಾಳೆ(ಜೂ.22) ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಹಕ್ಕೋತ್ತಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಾನೂನು ಸಲಹೆಗಾರ ಡಾ.ಬಿ.ರಾಮಾಚಾರಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಷ್ಟ್ರದ ಪರಮೋಚ್ಛ ನ್ಯಾಯಪೀಠವಾದ ಸರ್ವೋಚ್ಚ ನ್ಯಾಯಲಾಯವು ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ವಿಳಂಬವಾಗುತ್ತಿರುವುದರಿಂದ ರಾಷ್ಟ್ರದ ನಾಗರಿಕರಿಗೆ ಅದರಲ್ಲೂ ಬಡ ಜನರಿಗೆ ನ್ಯಾಯ ದೊರಕಿಸುವಲ್ಲಿ ವಿಳಂಬವಾಗುತ್ತಿದೆ ಎಂದರು.
ಸಂವಿಧಾನ ಅನುಚ್ಛೇದ 39(ಎ) ರಂತೆ ನ್ಯಾಯಕ್ಕಾಗಿ ನೆರವು ನೀಡುವುದು ಸರ್ಕಾರದ ಮತ್ತು ನ್ಯಾಯಾಲಯಗಳ ಸಂವಿಧಾನಬದ್ಧ ಕರ್ತವ್ಯವಾಗಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ದಕ್ಷಿಣ ಭಾರತೀಯ ಸರ್ವೋಚ್ಚ ನ್ಯಾಯಾಲಯದ ಸಂಚಾರಿ ಪೀಠವನ್ನಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಸಂವಿಧಾನ ಅನುಚ್ಛೇದ 130ರ ಪ್ರಕಾರ ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸುವ ಅಧಿಕಾರ ಸರ್ವೋಚ್ಚ ನ್ಯಾಯಾಲಯದ ವ್ಯಾಪ್ತಿಗೆ ಬರುವುದರಿಂದ ದಕ್ಷಿಣ ಭಾರತ ಸಂಚಾರಿ ಪೀಠ ಸ್ಥಾಪಿಸಬೇಕು. ಈಗಿನ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದಿಂದ ಬೃಹತ್ ಸಂಖ್ಯೆಯ ಸಂಸದರು ಆಯ್ಕೆಯಾಗಿರುವುದರಿಂದ ಈ ಪ್ರಾಮಾಣಿಕ ಬೇಡಿಕೆಗೆ ಸಂಬಂಧಪಟ್ಟವರು ತುರ್ತಾಗಿ ಸ್ಪಂದಿಸಿ ನಮ್ಮ ಹಕ್ಕೋತ್ತಾಯವನ್ನು ಈಡೇರಿಸಲು ಸಹಕರಿಸಬೇಕು ಎಂದರು.