ಬೆಂಗಳೂರು,ಜೂ.21- ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾಗಿರುವ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರು ಸೇರಿದಂತೆ ನಾಲ್ಕು ಹಿರಿಯ ಅಧಿಕಾರಿಗಳ ಮನೆ ಹಾಗೂ ಕಚೇರಿ ಸೇರಿದಂತೆ 14 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.
ಶಾಂತಿನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯ ವಿಭಾಗೀಯ ಸರಕು ಮತ್ತು ಸೇವಾ ಕಚೇರಿ ಮನವಿ-5ರ ಜಂಟಿ ಆಯುಕ್ತರಾದ ಎಂ.ಬಿ.ನಾರಾಯಣಸ್ವಾಮಿಯವರ ಶಾಂತಿನಗರದ ಕಚೇರಿ, ಮೈಸೂರಿನ ಪಿರಿಯಾಪಟ್ಟಣದಲ್ಲಿ ಪಂಚಾಯತ್ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಿರಿಯ ಇಂಜಿನಿಯರ್ ಆಗಿರುವ ಹರ್ಷದ್ ಪಾಷ, ರಾಮನಗರದ ಬಮೂಲ್ನ ವ್ಯವಸ್ಥಾಪಕರಾದ ಡಾ.ಶಿವಶಂಕರ್, ಲೋಕೋಪಯೋಗಿ ಇಲಾಖೆಯ ಹಾಸನ ವಿಶೇಷ ವಿಭಾಗದ ಸಹಾಯಕ ಇಂಜಿನಿಯರ್ ಎಚ್.ಎಸ್.ಚನ್ನೇಗೌಡ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರು.
ನಾರಾಯಣಸ್ವಾಮಿ ಅವರಿಗೆ ಸೇರಿದ ಬೆಂಗಳೂರಿನ ಜಯನಗರದ ವಾಸದ ಮನೆ, ಅವರ ಸಂಬಂಧಿಕರಿಗೆ ಸೇರಿದ ಬೆಂಗಳೂರಿನ ವಿನಾಯಕನಗರ ಮೇಡಹಳ್ಳಿಯಲ್ಲಿನ ಮನೆ, ಕೋಲಾರದಲ್ಲಿ ಎರಡು ಮನೆಗಳು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ತಾಲ್ಲೂಕಿನ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಶಾಂತಿನಗರದ ಕಚೇರಿಯ ಮೇಲೆ ದಾಳಿ ನಡೆಸಲಾಗಿದ್ದು, ಚಿಕ್ಕಬಳ್ಳಾಪುರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಮೂಲ್ನ ವ್ಯವಸ್ಥಾಪಕರಾದ ಡಾ.ಶಿವಶಂಕರ್ ಅವರು ವಾಸವಿರುವ ರಾಮನಗರದ ಅರ್ಕಾವತಿ ಬಡಾವಣೆಯ ನಿವಾಸ, ದೊಡ್ಡಬಳ್ಳಾಪುರದಲ್ಲಿರುವ ಸಂಬಂಧಿಕರ ಮನೆ, ಕೆಲಸ ನಿರ್ವಹಿಸುತ್ತಿರುವ ರಾಮನಗರದ ಬಮೂಲ್ ಶಿಬಿರದ ಕಚೇರಿ ಮೇಲೆ ದಾಳಿ ನಡೆದಿದ್ದು, ರಾಮನಗರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂಚಾಯತ್ರಾಜ್ನ ಸಹಾಯಕ ಅಭಿಯಂತರಾಗಿರುವ ಹರ್ಷದ್ ಪಾಷ ವಾಸಿಸುತ್ತಿರುವ ಮೈಸೂರಿನ ಉದಯಗಿರಿಯಲ್ಲಿನ ವಾಸದ ಮನೆ ಮತ್ತು ಕೆಲಸ ಮಾಡುತ್ತಿರುವ ಪಿರಿಯಾಪಟ್ಟದಲ್ಲಿರುವ ಕಚೇರಿ ಮೇಲೆ ದಾಳಿ ನಡೆದಿದ್ದು, ಮೈಸೂರಿನ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ ಚೆನ್ನೇಗೌಡ ಅವರ ಹಾಸನದ ಹೇಮಾವತಿ ನಗರದಲ್ಲಿನ ನಿವಾಸ, ಕಚೇರಿ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ.
ಆರೋಪಿತ ಅಧಿಕಾರಿಗಳು ಹೊಂದಿರುವ ಆಸ್ತಿಪಾಸ್ತಿಗಳ ಮೂಲಗಳ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.