ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮಧ್ಯಂತರ ಚುನಾವಣೆ ಬರಬಹುದು ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಹಿರಿಯರು ಯಾವ ಹಿನ್ನೆಲೆಯಲ್ಲಿ ಹಾಗೇ ಹೇಳಿದ್ದಾರೋ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಧ್ಯಂತರ ಚುನಾವಣೆಯ ಬಗ್ಗೆ ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 130 ವರ್ಷಗಳಲ್ಲಿ ಅನೇಕ ಏಳು ಬೀಳುಗಳನ್ನು ಕಾಂಗ್ರೆಸ್ ನೋಡಿಕೊಂಡು ಬಂದಿದೆ. ದೇವೇಗೌಡರು ಹಿರಿಯರು, ಅನುಭವಸ್ಥರು, ಪ್ರಧಾನಿ ಆಗಿದ್ದವರು. ಅವರು ಯಾವ ಕಾರಣಕ್ಕಾಗಿ ಹೇಳಿದ್ದಾರೋ ಗೊತ್ತಿಲ್ಲ, ಅದನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕು. ಅಲ್ಲದೆ ಈ ಕುರಿತು ನಾನು, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಕೂತು ಮಾತಾಡುತ್ತೇವೆ. ಅವರು ಹೇಳಿಕೆ ನೀಡುವಾಗ ಯೋಚನೆ ಮಾಡಿಯೇ ಹೇಳಿರುತ್ತಾರೆ ಎಂದರು.
ಬಿಜೆಪಿಯನ್ನು ದೂರ ಇಡಲು ಸಮ್ಮಿಶ್ರ ಸರ್ಕಾರ ಮಾಡಿದೆವು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಸೂಚನೆ ಮೇರೆಗೆ ಸರ್ಕಾರ ರಚನೆ ಆಗಿದೆ. ನಾವೇ ಎಚ್‍ಡಿಕೆ ಅವರು ಸಿಎಂ ಆಗಬೇಕು ಅಂತ ಹೇಳಿದೆವು. ಅದರಂತೆ ಸರ್ಕಾರ ರಚನೆ ಆಗಿದೆ. ನೀವೇ ಸರ್ಕಾರ ಮಾಡಿ ಎಂದು ಹೇಳಿದ್ದು ನಿಜ. ಎಚ್‍ಡಿಡಿ ಪುತ್ರನೇ ಸಿಎಂ ಎಂದು ನಾವು ಒಪ್ಪಿಕೊಂಡಿದ್ದೇವೆ. ಸಮ್ಮಿಶ್ರ ಸರ್ಕಾರ ಅಂದರೆ ಸಣ್ಣಪುಟ್ಟ ಸಮಸ್ಯೆ ಇದ್ದೇ ಇರುತ್ತದೆ. ಇದೆಲ್ಲವನ್ನ ನಡೆಸಿಕೊಂಡು ಹೋಗೋದೆ ಮೈತ್ರಿ ಸರ್ಕಾರ ಎಂದು ಅವರು ವಿವರಿಸಿದರು.
1/3 ನಿಯಮದಲ್ಲೆ ಸರ್ಕಾರ ನಡೆಯುತ್ತಿದೆ. ಯಾರೂ ಅದನ್ನ ಮೀರಿಲ್ಲ. ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಲು ಒಂದು ಅವರೇ ಕೊಟ್ಟಿದ್ದಾರೆ. ಸಿದ್ದರಾಮಯ್ಯ, ಸಿಎಂ ಚರ್ಚೆ ಮಾಡಿಯೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಯಾರೂ ಒತ್ತಾಯ ಮಾಡಿ ಸಚಿವ ಸ್ಥಾನ ತಗೊಂಡಿಲ್ಲ ಅಂದರು.
ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿಲ್ಲ. ನಾವು ಸ್ಟ್ರಾಂಗ್ ಆಗಿಯೇ ಇದ್ದೀವಿ. ಸೋಲು-ಗೆಲುವು ಕಾಂಗ್ರೆಸ್ ನೋಡಿಕೊಂಡು ಬಂದಿದೆ. ಇಂತಹ ಏಳು-ಬೀಳಗಳನ್ನು ಕಾಂಗ್ರೆಸ್ ಸಾಕಷ್ಟು ನೋಡಿದೆ. ಕಾಂಗ್ರೆಸ್ ಮುಳುಗಿ ಹೋಗಿದೆ ಎಂದು ಯಾರಾದ್ರು ಅಂದುಕೊಂಡರೆ ಅದು ತಪ್ಪು. 70 ರ ದಶಕದಲ್ಲಿ ಕಾಂಗ್ರೆಸ್ ನಿರ್ಮಾಣ ಆಯ್ತು ಎಂದು ಹೇಳಿದ್ದಾರೆ. ನಂತರ ಚುನಾವಣೆಯಲ್ಲಿ ಗೆದ್ದಿಲ್ವಾ?. ಕಾಂಗ್ರೆಸ್ ನಿರ್ಣಾಮ ಆಯ್ತು ಅಂದುಕೊಂಡರೆ ಅದು ತಪ್ಪು. ಈಗ ಬಿಜೆಪಿಗೆ ಜನ ಅಧಿಕಾರ ಕೊಟ್ಟಿದ್ದಾರೆ. ಅವರು ಅಧಿಕಾರ ಮಾಡಲಿ. ಮುಂದೆ ಚುನಾವಣೆಯಲ್ಲಿ ನೋಡೋಣ ಎಂದು ಸವಾಲೆಸೆದರು.