ಸುಳ್ಳು ಸುದ್ದಿಗಳಿಗೆ ಕಡಿವಾಣ; ಶೀಘ್ರವೇ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ

ನವದೆಹಲಿ: ಸಾಮಾಜಿಕ ಜಾಲತಾಣಗಲ್ಲಿ ಅನಧಿಕೃತ ಪೋಸ್ಟ್‍ಗಳ ಹಾವಳಿ ಹೆಚ್ಚುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಶೀಘ್ರ ಈ ಕುರಿತು ಅಧಿಸೂಚನೆ ಹೊರಡಿಸಲಿದೆ. ಈ ಮೂಲಕ ಮಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್, ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿನ ಕಾನೂನು ಬಾಹಿರ ಪೋಸ್ಟ್‍ಗಳಿಗೆ ಕಡಿವಾಣ ಹಾಕಲು ಚಿಂತಿಸಿದೆ. ಸುಳ್ಳು ಸುದ್ದಿ, ಪೋಸ್ಟ್‍ಗಳನ್ನು ಪತ್ತೆ ಹಚ್ಚಿ ಡಿಲೀಟ್ ಮಾಡುವುದು ಮಾತ್ರವಲ್ಲದೆ, ಪೋಸ್ಟ್ ಮಾಡಿದ ಮೂಲ ವ್ಯಕ್ತಿಯನ್ನು ಪತ್ತೆ ಹಚ್ಚಲು ಈ ಕಾಯ್ದೆಯಲ್ಲಿ ತಿಳಿಸಲಾಗಿದೆ.

ಮಾರ್ಗಸೂಚಿ ಸಿದ್ಧ: ಕಾಯ್ದೆ ತಿದ್ದುಪಡಿ ಕುರಿತು ಈಗಾಗಲೇ ಮಾರ್ಗ ಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಡಿಸೆಂಬರ್‍ನಲ್ಲಿ ಸರ್ಕಾರ ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶ ನೀಡಿತ್ತು. ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಐಟಿ ಕಾಯ್ದೆಯ ಕರಡು ತಿದ್ದುಪಡಿಗಳ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅಭಿಪ್ರಾಯ ಸಂಗ್ರಹದ ನಂತರ ಸಂದೇಶ ಕಳುಹಿಸಿದ ಮೂಲ ವ್ಯಕ್ತಿಯನ್ನು ಟ್ರೇಸ್ ಮಾಡುವುದು ಹಾಗೂ ಕಾನೂನು ಬಾಹಿರ ಪೋಸ್ಟ್‍ಗಳನ್ನು 24 ಗಂಟೆಗಳಲ್ಲಿ ಜಾಲತಾಣದಿಂದ ತೆಗೆದು ಹಾಕುವುದರ ಕುರಿತು ಕರಡು ನಿಯಮಗಳನ್ನು ಸಲ್ಲಿಸಲಾಗಿದೆ.

ತಿದ್ದುಪಡಿಗೆ ವಿರೋಧ: ಕರಡು ನಿಯಮಗಳ ಕುರಿತು ಕೆಲ ತಜ್ಞರು ಪೋಸ್ಟ್, ಸಂದೇಶಗಳ ಮೇಲೆ ‘ನಿಗಾ ವಹಿಸುಸುವ ಹಾಗೂ ಸೆನ್ಸಾರ್‍ಶಿಪ್’ (“Surveillance And Censorship”) ಭಯದ ಕುರಿತು ಟೀಕೆ ವ್ಯಕ್ತವಾಗಿವೆ. ಅಲ್ಲದೆ, ಪೋಸ್ಟ್‍ನ ಮೂಲವನ್ನು ಪತ್ತೆ ಹಚ್ಚುವ ವಿಷಯದಲ್ಲಿ ವಾಟ್ಸಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳು ವಿರೋಧ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ.

2018ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಕಲಿ ಸುದ್ದಿಗಳಿಂದ ಹಲವಾರು ಸಾವು-ನೋವುಗಳು ಸಂಭವಿಸಿವೆ ಎಂಬುದು ಸರ್ಕಾರದ ವಾದವಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳು ಭಯೋತ್ಪಾದನಾ ಚಟುವಟಿಕೆ, ಅಶ್ಲೀಲ ವಿಷಯಗಳ ಪ್ರಸಾರ, ಸುಳ್ಳು ಸುದ್ದಿಗಳನ್ನು ಹರಡುವುದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಸೇರಿದಂತೆ ವಿವಿಧ ರೀತಿಯ ಅಕ್ರಮಗಳನ್ನು ತಡೆಯಲು ಕಾನೂನು ಜಾರಿ ಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣಗಳು ಸವಾಲಾಗಿ ಪರಿಣಮಿಸಿವೆ ಎಂದು ಸರ್ಕಾರ ವಿವರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ