ಬೆಂಗಳೂರು, ಜೂ. 21- ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ. ಯೋಗ್ಯತೆ ಇದ್ದರೆ ಆಡಳಿತ ನಡೆಸಲಿ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದರ ಬಗ್ಗೆ ಸಂಶಯ ಬೇಡ ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಚುನಾವಣೆಗೆ ಹೋಗಲು ಸಿದ್ಧರಿಲ್ಲ ಎಂದರು.
ಮಧ್ಯಂತರ ಚುನಾವಣೆ ನಡೆಸಲು ಬಿಜೆಪಿ ಅವಕಾಶ ನೀಡುವುದಿಲ್ಲ. ಕಾಂಗ್ರೆಸ -ಜೆಡಿಎಸ್ನವರಿಗೆ ಆಡಳಿತ ನಡೆಸಲು ಆಗದಿದ್ದರೆ ಬಿಜೆಪಿ ಸರ್ಕಾರ ರಚನೆಗೆ ಸಿದ್ಧ ಎಂಬ ಸುಳಿವನ್ನು ಪರೋಕ್ಷವಾಗಿ ಬಿಎಸ್ವೈ ಸುಳಿವನ್ನು ನೀಡಿದ್ದಾರೆ.
ರಾಜ್ಯದಲ್ಲಿ ನಮಗೆ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಜನತೆ ನಮಗೆ 105 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಒಂದು ವೇಳೆ ಸರ್ಕಾರ ಬಿದ್ದು ಹೋದರೆ ದೊಡ್ಡಪಕ್ಷವಾಗಿ ನಾವು ಏನು ಮಾಡಬೇಕು. ಅದನ್ನೇ ಮಾಡುತ್ತೇವೆ. ಆದರೆ ಚುನಾವಣೆ ನಡೆಯಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಒಂದು ಕಡೆ ಕಾಂಗ್ರೆಸ್ನವರು ಮಧ್ಯಂತರ ಚ್ಠುನಾವಣೆ ಬೇಡ ಎನ್ನುತ್ತಾರೆ.ಜೆಡಿಎಸ್ನವರು ಚುನಾವಣೆಗೆ ಸಿದ್ಧ ಎನ್ನುತ್ತಾರೆ.ದೇವೇಗೌಡರ ಹೇಳಿಕೆಯನ್ನು ಜನರು ಅಪಾರ್ಥ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಾರೆ. ಒಟ್ಟಾರೆ ಸಮ್ಮಿಶ್ರ ಸರ್ಕಾರವೇ ಗೊಂದಲದಲ್ಲಿ ಮುಳುಗಿದೆ.ಇದರಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿವೆ ಎಂದು ದೂರಿದರು.
ಮಧ್ಯಂತರ ಚುನಾವಣೆಯಿಂದ ಜನತೆಗೆ ಹೊರೆಯಾಗುತ್ತದೆ.ಯಾವ ಪುರಷಾರ್ಥಕ್ಕೆ ಚುನಾವಣೆ ನಡೆಸಬೇಕೆಂದು ಗೊತ್ತಾಗುತ್ತಿಲ್ಲ. ಸರ್ಕಾರ ತನ್ನ ಪ್ರಮಾದಗಳಿಂದಲೇ ಬಿದ್ದು ಹೋದರೆ ಬಿಜೆಪಿ ಏನು ಮಾಡಬೇಕು ಎಂಬುದನ್ನು ನಂತರ ತೀರ್ಮಾನಿಸುತ್ತೇವೆ ಎಂದು ಹೇಳಿದರು.