![dss](http://kannada.vartamitra.com/wp-content/uploads/2018/12/dss-677x381.jpg)
ಬೆಂಗಳೂರು, ಜೂ.20- ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿರುವ ನಗರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಎಸ್.ಎಂ.ಶಿವಕುಮಾರ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಬೆಂಗಳೂರು ಜಿಲ್ಲಾ ಸಂಚಾಲಕ ಬೇಗೂರು ಮುನಿರಾಜು ಮಾತನಾಡಿ, ಈ ಹಿಂದೆ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಆಗಿ ಕೆಲಸ ನಿರ್ವಸುವಾಗ ಬೇಗೂರು ಹೋಬಳಿ ಎಳ್ಳುಕುಂಟೆ ಗ್ರಾಮದ ಸರ್ಕಾರಿ ಜಾಗ ಸರ್ವೆ ನಂ.13ರಲ್ಲಿ 12 ಎಕರೆ ಜಾಗವನ್ನು ಬಿ.ಡಿ.ಎ. ವಶಪಡಿಸಿಕೂಂಡಿದ್ದು, ಇದರ ಪರಿಹಾರ ಹಣವನ್ನು ಪಡೆಯಲು ಭೂಗಳ್ಳರ ಜೋತೆ ಸೇರಿ ವಾರಸುದಾರದಲ್ಲದವರಿಗೆ ಹಣವನ್ನು ಮಂಜೂರು ಮಾಡಿ ಅವರಿಗೆ ಸಿಗುವ ನಿವೇಶನಗಳನ್ನು ಲಪಟಾಯಿಸಲು ಭೂಗಳ್ಳರಿಗೆ ಅವರಿಂದ ಕರಾರು ಪತ್ರ ಮಾಡಿಸಿಕೊಂಡು ಲಕ್ಷಾಂತರ ರೂ. ತೆಗೆದುಕೊಂಡು ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ವಿಚಾರವಾಗಿ ಹಲವು ಬಾರಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವರಿಕೆ ಮಾಡಿ ಪ್ರಕರಣದ ಬಗ್ಗೆ ವಿಚಾರಣೆ ಮಾಡಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದರೂ ಸಹಾ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್.ಎಂ.ಶಿವಕುಮಾರ ಮೇಲೆ ಇನ್ನು 15 ದಿನಗಳೊಳಗೆ ಸೂಕ್ತ ಕ್ರಮ ಜರುಗಿಸದಿದ್ದರೆ ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ಹಮ್ಮಿಕೋಳ್ಳಲಾಗುವುದಾಗಿ ಮುನಿರಾಜು ಎಚ್ಚರಿಸಿದರು.