ನವದೆಹಲಿ, ಜೂ.20- 2020ರ ವೇಳೆಗೆ ನವಭಾರತ ನಿರ್ಮಾಣ ಗುರಿ ಸಾಕಾರ, ಕೃಷಿ ಉತ್ಪಾದನೆ ಹೆಚ್ಚಿಸಲು 25ಲಕ್ಷ ಕೋಟಿ ರೂ.ಗಳ ಅನುದಾನ, ಸಣ್ಣವ್ಯಾಪಾರಿಗಳಿಗೆ ನೂತನ ಪಿಂಚಣಿ ಯೋಜನೆ, ಜನ್ಧನ್ ಮೂಲಕ ಬ್ಯಾಂಕಿಂಗ್ ಸೇವೆ ವಿಸ್ತರಣೆ, ದೇಶದ 112ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿಗೆ ವಿಶೇಷ ಯೋಜನೆ- ಇವು ರಾಷ್ಟ್ರಪತಿ ರಾಮನಾಥ್ಕೋವಿಂದ್ ಅವರು, ಸಂಸತ್ ಜಂಟಿ ಅಧಿವೇಶನದಲ್ಲಿ ಮಾಡಿದ ಭಾಷಣದ ಮುಖ್ಯಾಂಶಗಳು.
ಹದಿನೇಳನೇ ಲೋಕಸಭೆಯ ಅಧಿವೇಶನದ ನಾಲ್ಕನೇ ದಿನವಾದ ಇಂದು ಸಂಸತ್ತಿನ ಸೆಂಟ್ರಲ್ಹಾಲ್ನಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಿದರು.
ಭವಿಷ್ಯದ ಯೋಜನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಬೆಳಕು ಚೆಲ್ಲಿದ ರಾಮನಾಥ್ಕೋವಿಂದ್ 2020ರಲ್ಲಿ ದೇಶವು 75 ನೇ ಸ್ವಾತಂತ್ರೋತ್ಸವನ್ನು ಆಚರಿಸಲಿದೆ. ಇದೇ ಸಂದರ್ಭದಲ್ಲಿ ನವಭಾರತ ಗುರಿಯನ್ನು ಸಾಕಾರಗೊಳಿಸುವುದಾಗಿ ಭರವಸೆ ನೀಡಿದರು.
ಗ್ರಾಮೀಣ ಭಾರತ ಮತ್ತು ನಗರಪ್ರದೇಶಗಳಲ್ಲಿ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹತ್ವದ ಯೋಜನೆಗಳನ್ನು ರೂಪಿಸಲಾಗುತ್ತಿದೆ. 2020ರ ವೇಳೆಗೆ ನವಭಾರತ ನಿರ್ಮಾಣ ಗುರಿಯನ್ನು ಮುಟ್ಟಲು ಉದ್ದೇಶಿಸಲಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ಅನ್ನದಾತರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಪಿಂಚಣಿ ಯೋಜನೆ ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಕೃಷಿ ಉತ್ಪಾದನೆ ಹೆಚ್ಚಿಸಲು 25ಲಕ್ಷ ಕೋಟಿ ರೂ.ಗಳ ಅನುದಾನವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಸಣ್ಣವ್ಯಾಪಾರಿಗಳಿಗೆ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದ್ದು ಇದರಿಂದ 3ಕೋಟಿ ಉದ್ದಿಮೆದಾರರಿಗೆ ನೆರವಾಗಲಿದೆ ಎಂದು ರಾಷ್ಟ್ರಪತಿ ತಿಳಿಸಿರು.
ಹುತಾತ್ಮ ಯೋಧರು ಮತ್ತು ಪೊಲೀಸರ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡಲಾಗಿದೆ. ಇದಕ್ಕಾಗಿ ಡಿಫೆನ್ಸ್ ಫಂಡ್ ಆರಂಭಿಸಲಾಗಿದೆ ಎಂದು ಹೇಳಿದರು.
ಜನ್ಧನ್ ಮೂಲಕ ಬ್ಯಾಂಕಿಂಗ್ ಸೇವೆ ವಿಸ್ತರಣೆ ಮಾಡಲಾಗುವುದು ಕಳೆದ 3ವರ್ಷದಲ್ಲಿ ಈ ಯೋಜನೆಯಡಿ 7.3ಲಕ್ಷ ಕೋಟಿ ಹಣವನ್ನು ನೇರ ಫಲಾನುಭವ ವರ್ಗಾವಣೆ ಯೋಜನೆಯಡಿ ವರ್ಗಾಯಿಸಲಾಗಿದೆ. ಈ ವರೆಗೆ 8 ಕೋಟಿ ನಕಲಿ ಫಲಾನುಭವಿಗಳನ್ನು ನಿರ್ಮೂಲನೆ ಮಾಡಲಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 1.41 ಲಕ್ಷ ಕೋಟಿ ರೂ. ಉಳಿತಾಯವಾಗಿದೆ.
ನನ್ನ ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆ ನೀತಿ ಹೊಂದಿದ್ದು, ಅವುಗಳ ನಿಗ್ರಹ ಕಾರ್ಯ ಮುಂದುವರೆಯಲಿದೆ. ಬಡತನ, ನಿರುದ್ಯೋಗ ನಿರ್ಮೂಲನೆಗೆ ಕೇಂದ್ರ ಸರ್ಕಾರ ಪ್ರಾಧಾನ್ಯತೆ ನೀಡಲಿದೆ ಎಂದು ಅವರು ತಿಳಿಸಿದರು.
ದೇಶದ 112ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಆಯುಷ್ಮಾನ್ ಯೋಜನೆ ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ಯೋಜನೆಯಾಗಿದೆ ಇದರ ಮೂಲಕ ದೇಶದ ಲಕ್ಷಾಂತರ ಜನರು ಪ್ರಯೋಜ ಪಡೆಯುತ್ತಿದ್ದಾರೆ 2020ರ ವೇಳೆಗೆ 1.5 ಸೌಖ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ರಾಷ್ಟ್ರಪತಿ ತಿಳಿಸಿದರು.
ದೇಶದಲ್ಲಿ 53ಸಾವಿರ ಜನೌಷಧಿ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಬಡವರು ಮತ್ತು ಮದ್ಯಮವರ್ಗದವರಿಗೆ ಕಡಿಮೆ ದರದಲ್ಲಿ ಔಷಧಿಗಳು ಲಭಿಸುತ್ತೇವೆ ಎಂದು ಅವರು ತಿಳಿಸಿದರು.
ಜಲ ಬಿಕ್ಕಟ್ಟನ್ನು ತಪ್ಪಿಸಲು ಮತ್ತು ನೀರನ್ನು ಸಂರಕ್ಷಿಸಲು ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಹೊಸ ಕೈಗಾರಿಕಾ ನೀತಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು, ಸರಕುಗಳು ಮತ್ತು ಸೇವೆಗಳ ತೆರಿಗೆಗಳು (ಜಿಎಸ್ಟಿ) ಮತ್ತಷ್ಟು ಸರಳಗೊಳಿಸುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಕೋವಿಂದ್ ಹೇಳಿದರು.
ನವಭಾರತ ನಿರ್ಮಾಣಕ್ಕಾಗಿ ಮತ್ತು ಭಾರತ ಅಭಿವೃದ್ಧಿಪತದ್ದ ಸಾಗಲು ಸ್ಪಷ್ಟ ಜನಾದೇಶ ನೀಡಿದ್ದಾರೆ. ಸದೃಢ, ಸುರಕ್ಷಿತ ಮತ್ತು ಪರಿಪೂರ್ಣ ಭಾರತ ನಿರ್ಮಾಣದತ್ತ ಪ್ರಧಾನಿ ಮೋದಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆಂದು ರಾಷ್ಟ್ರಪತಿ ಪ್ರಶಂಶಿಸಿದರು.
ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಸ್ಪಷ್ಟ ಬಹುಮತದ ಸರ್ಕಾರ ಕೇಂದ್ರದಲ್ಲಿ ರಚನೆಯಾಗಿದೆ. 2014ರ ನಂತರ ನವಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತಿದೆ. ಇದು ದೇಶದ ಸರ್ವಾಂಗಿಣ ಲಕ್ಷಣವಾಗಿದೆ ಎಂದು ರಾಷ್ಟ್ರಪತಿ ಬಣ್ಣಿಸಿದರು.
ಮೋದಿ ನೇತೃತ್ವದ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಭಾರತದ ಅಭಿವೃದ್ಧಿ ದಿಕ್ಕನ್ನೇ ಬದಲಿಸಿದ್ದಾರೆ. ನವಭಾರತ ನಿರ್ಮಾಣದತ್ತ ದೇಶವೂ ದಾಪುಗಾಲು ಹಾಕುತ್ತಿದೆ. ಇನ್ನೊಂದು ವರ್ಷದಲ್ಲಿ ಈ ಗುರಿಯನ್ನು ತಲುಪಲು ನಾವು ದೃಢ ಸಂಕ್ಪಲ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಘೋಷಿಸಿದರು.
ಯಶಸ್ವಿಯಾಗಿ ಚುನಾವಣೆ ನಡೆಯುವ ಮೂಲಕ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಜಗತ್ತಿಗೆ ಮಾದರಿಯಾಗಿದೆ. ಇದಕ್ಕಾಗಿ ನಾನು ದೇಶದ ಜನಗಳನ್ನು ಮತ್ತು ಚುನಾವಣಾ ಆಯೋಗವನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.
ಈ ಬಾರಿ ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಮತಚಲಾಯಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳೆ ಸಂಸದರೂ ಕೂಡ ಚುನಾಯಿತಾಗಿದ್ದಾರೆ. ಹದಿನೇಳನೇ ಲೋಕಸಭೆಗೆ ಚುನಾಯಿತರಾದ ಎಲ್ಲಾ ಸಂಸದರನ್ನು ಮತ್ತು ನೂತನ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.