ಕಾನ್ಪುರ/ಲಕ್ನೋ, ಜೂ.20- ಪಾಕಿಸ್ತಾನದ ಗೂಢಚಾರಿಣಿಯೊಬ್ಬಳು ಮೂರು ವರ್ಷಗಳ ಅವಧಿಯಲ್ಲಿ 98 ಸೇನಾಧಿಕಾರಿಗಳ ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿ ರಹಸ್ಯ ಮಾಹಿತಿಗಳನ್ನು ತನ್ನ ದೇಶಕ್ಕೆ ಸೋರಿಕೆ ಮಾಡಿರುವ ಆತಂಕಕಾರಿ ಸಂಗತಿ ಬಹಿರಂರಗೊಂಡಿದೆ.
ಸೆಜಲ್ ಕಪೂರ್ ಎಂಬ ಹೆಸರಿನಲ್ಲಿ ಫೇಸ್‍ಬುಕ್‍ನಲ್ಲಿ ಸಕ್ರಿಯವಾಗಿದ್ದ ಈಕೆ 2015 ರಿಂದ 2018ರವರೆಗೆ ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಪಂಜಾಬ್‍ನ 98 ಅಧಿಕಾರಿಗಳ ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿದ್ದಾರೆ. ಭೂಸೇನ, ವಾಯುಪಡೆ, ಅರೆ ಸೇನಾಪಡೆ ರಾಜ್ಯ ಪೊಲೀಸ್ ಸೇರಿದಂತೆ ರಕ್ಷಣಾ ಪಡೆಗಳು ಮತ್ತು ವಿವಿಧ ಸಂಸ್ಥೆಗಳ ಹಿರಿಯ ಅಧಿಕಾರಿಗಳ ಕಂಪ್ಯೂರ್‍ಗಳನ್ನು ಹ್ಯಾಕ್ ಮಾಡಿದ್ದಾಳೆ.
ಪಶ್ಚಿಮ ಆಫ್ರಿಕಾ ದೇಶದ ಮೂರನೇ ವ್ಯಕ್ತಿಯ ಸರ್ವರ್‍ನಿಂದ ಬಿಡುಗಡೆ ಮಾಡಲಾದ ಸಾಫ್ಟ್‍ವೇರ್ ಮಾಲ್‍ವೇರ್‍ನಿಂದ ತನ್ನ ಆಕರ್ಷಕ ವಿಡಿಯೋಗಳು ಮತ್ತು ಪೋಟೊಗಳನ್ನು ತೋರಿಸುವ ಮೂಲಕ ತನ್ನ ಗುರಿಯನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದಳು.
ಕಳೆದ ವರ್ಷ ಬ್ರಹ್ಮೋಸ್ ಕ್ಷಿಪಣಿಯ ವರ್ಗೀಕೃತ ದತ್ತಾಂಶ ಮಾಹಿತಿ ಸೋರಿಕೆಯಾಗುವಲ್ಲಿ ಈಕೆ ಪ್ರಮುಖ ಪಾತ್ರ ವಹಿಸಿದ್ದಳು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಆಕೆ ವಿಸ್ಪರ್ (ಕಿವಿಮಾತು) ಎಂಬ ಮಾಲ್‍ವೇರ್ ಉಪಯೋಗಿಸಿ ಅಧಿಕಾರಿಗಳನ್ನು ಮೋಡಿ ಮಾಡುತ್ತಿದ್ದಳು. ಮಾಲ್‍ವೇರ್ ಮೂಲಕ ಅವರ ಕಂಪ್ಯೂಟರ್‍ಗಳಲ್ಲಿದ್ದ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಕದಿಯುತ್ತಿದ್ದಳು ಎಂದು ತನಿಖಾ ವರದಿಯೊಂದು ತಿಳಿಸಿದೆ.
ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ನಿಂದ ಬ್ರಹ್ಮೋಸ್ ಕ್ಷಿಪಣಿ ಯೋಜನೆಗಳ ಹಿರಿಯ ಎಂಜಿನಿಯರ್ ನಿಶಾಂತ್ ಅಗರ್‍ವಾಲ್ ಬಂಧನದ ನಂತರ ಸೆಜಲ್ ಕಪೂರ್ ಹೆಸರಿನಲ್ಲಿ ಸಕ್ರಿಯವಾಗಿ ಫೇಸ್‍ಬುಕ್ ಅಕೌಂಟ್‍ನನ್ನು ಹಾನಿಗೇಡವಲಾಗಿದೆ.
ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಗೂಢಚಾರಿಣಿ ನಿಶಾಂತ್‍ಗೆ ಫೇಸ್‍ಬುಕ್‍ನಲ್ಲಿ ಮರಳು ಮಾಡಿ ಬ್ರಹ್ಮೋಸ್ ಕ್ಷಿಪಣಿಗೆ ಸಂಬಂಧಿಸಿದ ಕೆಲವು ವರ್ಗೀಕೃತ ಮಾಹಿತಿಗಳನ್ನು ಪಡೆದಿದ್ದಳು.
ಈಕೆ ಫೇಸ್ ಬುಕ್‍ನಲ್ಲಿ ನಡೆಸಿದ್ದ 60ಕ್ಕೂ ಹೆಚ್ಚು ಚಾಟ್ ಸಂಭಾಷಣೆಗಳನ್ನು ಎಟಿಎಸ್ ಪತ್ತೆ ಮಾಡಿದೆ.
ಈ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿರುವ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಇತರ ಅಧಿಕಾರಿಗಳು ಮತ್ತು ಇದರ ಜಾಲವನ್ನು ಶೋಧಿಸುತ್ತಿದ್ದಾರೆ.