ನವದೆಹಲಿ, ಜೂ.20- ಪಶ್ಚಿಮ ಬಂಗಾಳದ ಚಿತ್ರನಟಿ ಮತ್ತು ತೃಣಮೂಲ ಕಾಂಗ್ರೆಸ್ನಿಂದ ಪ್ರಥಮ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವ ನುಸ್ರತ್ ಜಹಾನ್ ಮತ್ತು ಉದ್ಯಮಿ ನಿಖಿಲ್ ಜೈನ್ ಅವರ ವಿವಾಹ ಟರ್ಕಿಯಲ್ಲಿ ನೆರವೇರಿದೆ.
ಈ ಸುದ್ದಿಯನ್ನು ಸ್ವತಃ ನುಸ್ರತ್ ಇಂದು ಟ್ವೀಟರ್ ಮೂಲಕ ಖಚಿತಪಡಿಸಿದ್ದು, ತಮ್ಮ ವಿವಾಹದ ಪೋಟೋಗಳನ್ನು ವೈರಲ್ ಮಾಡಿದ್ದಾರೆ.
ನುಸ್ರತ್ ನೂತನ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ಅವರ ಬಗ್ಗೆ ಪಕ್ಷದ ಮುಖ್ಯಸ್ಥ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ಮುಖಂಡರಿಗೆ ಖಚಿತ ಮಾಹಿತಿ ಇರಲಿಲ್ಲ.
ಆದರೆ, ಇಂದು ಅವರು ನಿಖಿಲ್ ಜೈನ್ ಜತೆ ವಿವಾಹವಾಗಿರುವ ಪೋಟೋವನ್ನು ಪ್ರಕಟಿಸಿದ್ದು, ತಮ್ಮ ಮದುವೆಯನ್ನು ಅಧಿಕೃತವಾಗಿ ಬಹಿರಂಗಗೊಳಿಸಿದ್ದಾರೆ.
ನಾನು ನಿಖಿಲ್ ಜೈನ್ರನ್ನು ಬಹುವಾಗಿ ಇಷ್ಟಪಟ್ಟು ಮದುವೆಯಾಗಿದ್ದೇನೆ. ನಮ್ಮಿಬ್ಬರ ವಿವಾಹ ಖುಷಿ ನೀಡಿದೆ ಎಂದು ನುಸ್ರತ್ ತಿಳಿಸಿದ್ದಾರೆ.