![h vishwanath](http://kannada.vartamitra.com/wp-content/uploads/2019/06/h-vishwanath-1-571x381.jpg)
ಬೆಂಗಳೂರು, ಜೂ.20- ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ ಎಂದು ಹಠಕ್ಕೆ ಬಿದ್ದಿರುವ ಶಾಸಕ ಎಚ್.ವಿಶ್ವನಾಥ್, ಒಂದು ವೇಳೆ ರಾಜೀನಾಮೆ ಅಂಗೀಕರಿಸದೇ ಇದ್ದರೆ ಹುಣಸೂರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಚಿಂತನೆ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಶಾಸಕರ ಭವನದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರಬಹುದು ಎಂದು ದೇವೇಗೌಡರು ಭವಿಷ್ಯ ನುಡಿದಿದ್ದಾರೆ. ಕಳೆದ ವಾರ ನಡೆದ ಮಾತುಕತೆ ವೇಳೆ ನಾನು ಅವರಿಗೆ ನನ್ನ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು.
ಮಧ್ಯಂತರ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಅಗತ್ಯವಿದೆ. ಅದಕ್ಕಾಗಿ ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡಿ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿ. ಈ ಹಿಂದೆ ದೇವರಾಜ ಅರಸ್, ಎಸ್.ಎಂ.ಕೃಷ್ಣ ಮತ್ತಿತರರು ಮುಖ್ಯಮಂತ್ರಿ ಹುದ್ದೆ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಿದ ಉದಾಹರಣೆಗಳಿವೆ ಎಂದು ಹೇಳಿದರು.
ಪಕ್ಷದ ಕೆಳ ಹಂತದ ಕಾರ್ಯಕರ್ತರಿಗೆ ನಿಗಮ ಮಂಡಳಿ ನೇಮಕಾತಿಯಲ್ಲಿ ಅವಕಾಶ ಕೊಟ್ಟು ಪಕ್ಷ ನನ್ನದು ಎಂಬ ಭಾವನೆ ಮೂಡಿಸಬೇಕಿದೆ. ಜೆಡಿಎಸ್ ಪಾಲಿಗೆ ಬಂದಿರುವ ಇನ್ನೂ 11 ಮಂಡಳಿಗಳ ಹುದ್ದೆಗಳು ಖಾಲಿ ಇವೆ. ಒಂದು ಮಂತ್ರಿ ಸ್ಥಾನ ಬಾಕಿ ಇದೆ. ನಿಗಮಮಂಡಳಿಗಳ 360 ನಿರ್ದೇಶಕ ಸ್ಥಾನಗಳು ನಮ್ಮ ಪಾಲಿಗೆ ಇವೆ. ಅವುಗಳಿಗೆ ಕಾರ್ಯಕರ್ತರನ್ನು ನೇಮಿಸಿ ಪಕ್ಷ ನನ್ನದು ಎಂಬ ಭಾವನೆಯನ್ನು ಗಟ್ಟಿಗೊಳಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕಿದೆ ಎಂದರು.
ಈಗಾಗಲೇ ಮಾಧ್ಯಮಗಳ ಮೂಲಕವೇ ರಾಜೀನಾಮೆಯನ್ನು ಘೋಷಣೆ ಮಾಡಿದ್ದೇನೆ. ಕಳೆದ ವಾರ ನಡೆದ ಮಾತುಕತೆ ವೇಳೆ ದೇವೇಗೌಡರು ರಾಜೀನಾಮೆ ಹಿಂಪಡೆಯುವಂತೆ ಸೂಚನೆ ನೀಡಿದ್ದರು. ಇಂದು ಅವರನ್ನು ಭೇಟಿ ಮಾಡಿ ನನ್ನ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದೆ. ಅವರನ್ನ ಭೇಟಿ ಮಾಡುವ ಚೈತನ್ಯ ನನ್ನಲ್ಲಿಲ್ಲ. ಯಾರಿಗೆ ಬೇಕಾದರು ಎದುರು ನಿಂತು ಮಾತನಾಡುತ್ತೇನೆ. ಆದರೆ, ದೇವೇಗೌಡರ ಮುಖಾಮುಖಿ ನಿಂತು ಎದುರಿಸುವ ಶಕ್ತಿ ನನಗಿಲ್ಲ. ಅವರ ಹಿರಿತನ ಹಾಗೂ ಅವರು ಮಾಡಿದ ಸಹಾಯಕ್ಕೆ ಬೆಲೆ ಕೊಡುತ್ತಿದ್ದೇನೆ. ನಮ್ಮ ಕುಟುಂಬ ಸದಾ ಅವರಿಗೆ ಚಿರಋಣಿಯಾಗಿರುತ್ತದೆ. ಕೂಡಲೇ ರಾಜೀನಾಮೆಯನ್ನು ಅಂಗೀಕರಿಸಿ ಎಂದು ಹೇಳಿದರು.
ನನ್ನ ಅನುಭವಗಳು ಬಳಕೆಯಾಗುತ್ತಿಲ್ಲ. ರಾಜ್ಯ ರಾಜಕಾರಣದಲ್ಲಿ ನನಗೂ ಸಾಕಷ್ಟು ಹಿರಿತನವಿದೆ. ಆಡಳಿತವೂ ಗೊತ್ತಿದೆ. ಹಾಗೆಂದು ನಾನು ಮಂತ್ರಿ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಮಂತ್ರಿಯಾಗುವುದಕ್ಕಿಂತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ನಿಂತು ಸಮಸ್ಯೆಗಳನ್ನು ಬಗೆಹರಿಸಲು ಹೆಗಲು ಕೊಡಬೇಕು ಎಂದಿದ್ದೆ. ಆದರೆ, ಕುಮಾರಸ್ವಾಮಿ ಅವರು ಏಕೋ ನನ್ನನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರೂ ಕೂಡ ನನ್ನನ್ನು ಕಡೆಗಣಿಸಿದ್ದರು ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಮುಖ್ಯಮಂತ್ರಿ ಉದಾಸೀನ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಣ ನಾಯಕನಿಲ್ಲದೆ ಸೊರಗುತ್ತಿದೆ. ಅಧಿಕಾರಿಗಳೇ ದರ್ಬಾರ್ ನಡೆಸುತ್ತಿದ್ದಾರೆ. ಜಿ.ಟಿ.ದೇವೇಗೌಡ ಅವರು ಉನ್ನತ ಶಿಕ್ಷಣ ಖಾತೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಬೇರೆ ಇಲಾಖೆ ಬೇಕು ಎಂದರೂ ಕೊಡುತ್ತಿಲ್ಲ. ಕೂಡಲೇ ಶಿಕ್ಷಣ ಮಂತ್ರಿಗಳನ್ನು ಮುಖ್ಯಮಂತ್ರಿಗಳು ನೇಮಿಸಬೇಕು. ಇಲ್ಲವಾದರೆ ರಾಜ್ಯವನ್ನು ಅಂಧಕಾರದತ್ತ ದೂಡುತ್ತಿದ್ದೇವೆ ಎಂಬ ಭಾವನೆ ಗಟ್ಟಿಗೊಳ್ಳುತ್ತದೆ ಎಂದರು.
ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಲಾಗಿದೆ. ಕಚೇರಿಯನ್ನೂ ಹಂಚಿಕೆ ಮಾಡಲಾಗಿದೆ. ಆದರೆ, ಅವರಿಗೆ ಖಾತೆಯ ಜವಾಬ್ದಾರಿ ಕೊಟ್ಟಿಲ್ಲ. ಹೀಗಿದ್ದ ಮೇಲೆ ನೂತನ ಸಚಿವರು ಕೊಠಡಿಯಲ್ಲಿ ಕುಳಿತು ಏನು ಮಾಡಬೇಕು ಎಂದು ಪ್ರಶ್ನಿಸಿದ ವಿಶ್ವನಾಥ್ ಅವರು, ಖಾತೆ ಹಂಚಿಕೆ ಮಾಡದಿದ್ದರೆ ಅವಮಾನ ಮಾಡಿದಂತೆ. ಕೂಡಲೇಅವರಿಗೆ ಖಾತೆ ನೀಡಿ ಎಂದು ಒತ್ತಾಯಿಸಿದರು.
ಶಾಸಕ ರೋಷನ್ ಬೇಗ್ ಅವರನ್ನು ಕಾಂಗ್ರೆಸ್‍ನಿಂದ ಅಮಾನತು ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್ ಅವರು, ಸಿದ್ದರಾಮಯ್ಯ ಅವರ ದ್ವೇಷಕ್ಕೆ ಒಂದು ಸಮಾದಾಯ ಮುಖಂಡನನ್ನು ಅಮಾನತು ಮಾಡುವುದು ಸರಿಯಲ್ಲ. ನಾನು ರೋಷನ್ ಬೇಗ್ ಅವರ ಜತೆ ಕೆಲಸ ಮಾಡಿದ್ದೇನೆ. ಒಂದು ವೇಳೆ ನಾನು ಕಾಂಗ್ರೆಸ್‍ನಲ್ಲಿ ಇದ್ದಿದ್ದರೆ ನನಗೂ ಈ ಗತಿಯೇ ಬರುತ್ತಿತ್ತು. ಎಲ್ಲಾ ನಾಯಕರನ್ನು ತುಳಿಯುತ್ತಿರುವ ಸಿದ್ದರಾಮಯ್ಯ ಯಾವ ಸೀಮೆಯ ಅಹಿಂದ ನಾಯಕ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನನ್ನ ತಾಯಿ ಇದ್ದಂತೆ. ಈಗಲೂ ಕಾಂಗ್ರೆಸ್ ಪಕ್ಷವನ್ನು ನನ್ನ ತಾಯಿ ಎಂದೇ ಕರೆಯುತ್ತೇನೆ. ಜೆಡಿಎಸ್ ಎಂದರೆ ಜಾತ್ಯತೀತತೆ. ಅದು ನನ್ನ ಧಮನಿ ಧಮನಿಗಳಲ್ಲೂ ಅಡಗಿದೆ. ರಾಜ್ಯದ ಸಾಮಾಜಿಕ ಆಡಳಿತ, ಸಾಮಾಜಿಕ ನ್ಯಾಯ ಎಲ್ಲೋ ಕಳೆದು ಹೋಗುತ್ತಿದೆ ಎಂಬ ಅನುಮಾನ ಕಾಡಲಾರಂಭಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.