ಬೆಂಗಳೂರು, ಜೂ.20- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಒಂದು ವರ್ಷದ ಸಾಧನೆಗಳ ಪುಸ್ತಕವನ್ನು ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಅದರಲ್ಲಿ ಜನತಾದರ್ಶನ, ಕೃಷಿ ಸಾಲ ಮನ್ನಾ, ಬಡವರ ಬಂಧು ಯೋಜನೆಗಳ ಸಮಗ್ರ ವಿವರಣೆ ನೀಡಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಈ ಪುಸ್ತಕದಲ್ಲಿ ಪ್ರತಿ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ.
ರಾಜ್ಯದಲ್ಲಿ 30 ಲಕ್ಷ ಸಾಲ ಖಾತೆಗಳನ್ನು ಸಾಲ ಮನ್ನಾಕ್ಕೆ ಅರ್ಹ ಎಂದು ಗುರುತಿಸಲಾಗಿದೆ. 16 ಸಾವಿರ ಕೋಟಿ ರೂ. ಸಾಲದ ಮೊತ್ತವಾಗಿದ್ದು, ಇದುವರೆಗೆ ಅಗತ್ಯ ದಾಖಲೆ, ಸ್ವಯಂ ಘೋಷಣೆ ಸಲ್ಲಿಸಿ ಸಾಲ ಮನ್ನಾ ಸೌಲಭ್ಯಕ್ಕೆ ಅನುಮೋದನೆ ಪಡೆದ ರೈತರ ಸಂಖ್ಯೆ 23 ಲಕ್ಷವಾಗಿದೆ. ಇದರಲ್ಲಿ ಸಹಕಾರಿ ಬ್ಯಾಂಕ್ ಸಾಲ ಖಾತೆಗಳು 14 ಲಕ್ಷ, ವಾಣಿಜ್ಯ ಬ್ಯಾಂಕ್ ಖಾತೆ 9 ಲಕ್ಷಗಳಾಗಿವೆ.
ಈ ಫಲಾನುಭವಿಗಳ ಸಾಲ ಖಾತೆಗೆ ಈಗಾಗಲೇ 10,830 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ 2ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈ ವರ್ಷದ ಜುಲೈ ವೇಳೆಗೆ ಸಾಲ ಮನ್ನಾದ ಎಲ್ಲಾ ಹಣವನ್ನು ಬಿಡುಗಡೆ ಮಾಡಲಾಗುವುದು. ಯೋಜನೆ ಪೂರ್ಣಗೊಂಡಿದ್ದರೂ ಅರ್ಹ ರೈತರು ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಿದರೆ ಸಾಲದ ಮೊತ್ತ ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸರ್ಕಾರ ವಿವರಿಸಿದೆ.
ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಶೂನ್ಯ ಬಂಡಾವಳ ಕೃಷಿ, ಕರ್ನಾಟಕ ರೈತ ಸುರಕ್ಷ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ. ಸಿರಿಧಾನ್ಯ ಬೆಳೆಗೆ ಉತ್ತೇಜನ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿಗೆ ವಿಶೇಷ ಕೋಶ ರಚಿಸಿ ನಿರ್ದೇಶಕರನ್ನು ನಿಯೋಜಿಸುತ್ತಿರುವ ಬಗ್ಗೆ ತಿಳಿಸಲಾಗಿದೆ.
ತೋಟಗಾರಿಕೆ ಇಲಾಖೆಯಲ್ಲಿ ಇಂಡೋ ಇಸ್ರೇಲ್ ಸಹಭಾಗಿತ್ವದಲ್ಲಿ ಕೋಲಾರ, ಬಾಗಲಕೋಟೆ, ಧಾರವಾಡದಲ್ಲಿ ಉತ್ಕøಷ್ಟತಾ ಕೇಂದ್ರಗಳಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಪರಿಚಯಿಸಲಾಗುತ್ತಿದೆ.
ಅಪರೂಪದ ಎಕ್ಸಾಟಿಕ್ ಹಣ್ಣುಗಳ ತಳಿ ಬೆಳೆಯಲು ಒತ್ತು ನೀಡಲಾಗಿದೆ. ಒಣಗಿದ ತೆಂಗು ಮರಗಳಿಗೆ 110ಕೋಟಿ ರೂ. ಪರಿಹಾರ ನೀಡಲಾಗಿದೆ. ರಾಷ್ಟ್ರೀಯ ಮೇವು ಭದ್ರತಾ ನೀತಿ ರೂಪಿಸಿ ಜಾನುವಾರುಗಳ ಮೇವಿನ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ.
ಒಳನಾಡು ಮೀನು ಕೃಷಿಗೆ ಪ್ರೋತ್ಸಹ ನೀಡಲಾಗುತ್ತಿದ್ದು, ಮತ್ಸ್ಯಜೋಪಾಸನೆ ಯೋಜನೆಯಡಿ 19 ಶಿಥಿಲೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಸಹಕಾರ ಇಲಾಖೆಯಲ್ಲಿ ಕಾಯಕ ಬಡವರ ಬಂಧು ಯೋಜನೆ ಜನಪ್ರಿಯಗೊಂಡಿದ್ದು, ಬಡವರ ಬಂಧು ಯೋಜನೆಯಡಿ 18,973 ವ್ಯಾಪಾರಿಗಳಿಗೆ 11.23 ಕೋಟಿ ರೂ.ಸಾಲ ಸೌಲಭ್ಯ ನೀಡಲಾಗಿದೆ. ಕಾಯಕ ಯೋಜನೆಯಡಿ ಶೂನ್ಯ ಬಡ್ಡಿ ದರ ಮತ್ತು ಶೇ.4ರ ಬಡ್ಡಿ ದರದಲ್ಲಿ ಈವರೆಗೂ 232 ಸ್ವಸಹಾಯ ಗುಂಪುಗಳಿಗೆ 12.5 ಕೋಟಿ ಸಾಲ ನೀಡಲಾಗಿದೆ ಎಂದು ವಿವರಿಸಲಾಗಿದೆ.
ಜಲಸಂಪನ್ಮೂಲ ಇಲಾಖೆಯ ಸಾಧನೆಯಲ್ಲಿ ಕಳೆದ ಒಂದು ವರ್ಷದಲ್ಲಿ 22,774 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಾಮಥ್ರ್ಯ ಒದಗಿಸಿರುವುದಾಗಿ ತಿಳಿಸಲಾಗಿದೆ.
ಮೇಕೆದಾಟು ಯೋಜನೆಗೆ ವಿವರ ಯೋಜನಾವರದಿ ತಯಾರಿಸಿ ಸಲ್ಲಿಸಲಾಗಿದೆ. ಭದ್ರಾ ಯೋಜನೆಯಡಿ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 5ಲಕ್ಷದ 57 ಸಾವಿರ ಹೆಕರೆಗೆ ಮತ್ತು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳ 367 ಸಣ್ಣ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತೀವ್ರಗತಿಯಲ್ಲಿ ಕೈಗೊಳ್ಳಲಾಗಿದೆ.
ಎತ್ತಿನಹೊಳೆ ಯೋಜನೆಯಡಿ ಈವರೆಗೂ 4,530 ಕೋಟಿ ಖರ್ಚು ಮಾಡಲಾಗಿದೆ. ಮೈಸೂರಿನ ಕೆಆರ್‍ಎಸ್‍ನಲ್ಲಿ 1,425 ಕೋಟಿ ರೂ. ವೆಚ್ಚದಲ್ಲಿ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಯೋಜನೆ ತಯಾರಿಸಲಾಗಿದ್ದು, ನಿಗಮ ಮಂಡಳಿಯ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಲಾಗಿದೆ.
ಕನ್ನಡ ನಾಡಿನ ಸಂಸ್ಕøತಿಯನ್ನು ಭಾರತಕ್ಕೆ ಪರಿಚಯಿಸಲು ಜನಪದ ಸಾಂಸ್ಕøತಿಕ ಭಾರತ ಕಾರ್ಯಕ್ರಮ ಯೋಜನೆ ರೂಪಿಸಲಾಗಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಭಾರತೀಯ ವಿಜ್ಞಾನ ಸಂಸ್ಥೆಗೆ 64 ಲಕ್ಷ ರೂ. ನೀಡಲಾಗಿದೆ . ಸಾಮಾಜಿಕ ಅರಣ್ಯ ಅಭಿವೃದ್ಧಿ ಮಾಡುವ ಸಲುವಾಗಿ 6.30 ಲಕ್ಷ ಸಸಿ ವಿತರಿಸಲಾಗಿದ್ದು, ಈ ವರ್ಷ 50 ಲಕ್ಷ ಸಸಿ ಬೆಳೆಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭದ ಬಗ್ಗೆ ಪ್ರಸ್ತಾಪಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಸಿಸಿ ಟಿವಿ ಅಳವಡಿಸಲಾಗುತ್ತಿದ್ದು, 10 ಕೋಟಿಯ ಕ್ರಿಯಾ ಯೋಜನೆ ರೂಪಿಸಿ ಟೆಂಡರ್ ನೀಡಲಾಗುತ್ತಿದೆ.
ಪ್ರಥಮ ಬಾರಿಗೆ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಒದಗಿಸಲಾಗುತ್ತಿದೆ. ಉನ್ನತ ಶಿಕ್ಷಣ ಖಾತೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದ್ದು, ವಿದ್ಯಾರ್ಥಿನಿಯರ ಶುಲ್ಕ ವಿನಾಯಿತಿ, ಕೌಶಲ್ಯಾಧಾರಿತ ವಿವಿ ಸ್ಥಾಪನೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಂಯೋಜಿತ ಆಯುಷ್ಮಾನ್ ಭಾರತ್ ಯೋಜನೆಯಡಿ ಈವರೆಗೂ 81 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. 402 ಖಾಸಗಿ ಆಸ್ಪತ್ರೆಗಳು, 410 ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಮಾಡಿಕೊಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಗತಿ ಕಾಲೋನಿ ನಿರ್ಮಾಣ ಯೋಜನೆಯಡಿ 495 ಕೋಟಿ ವೆಚ್ಚ ಮಾಡಲಾಗುತ್ತಿದೆ. ಐರಾವತ, ಸಮೃದ್ಧಿ ಯೋಜನೆಯಡಿ ಸುಮಾರು 7ಸಾವಿರ ಫಲಾನುಭವಿಗಳಿಗೆ ಸ್ವಯಂ ಉದ್ಯೋಗದ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಲಾಗಿದೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಜಯಮಾಲಾ, ನಾಗೇಶ್, ಶಂಕರ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.