ಐಎಂಎ ಪ್ರಕರಣದಲ್ಲಿ ಅರೆಸ್ಟ್ ಆಗ್ತಾರಾ ರೋಷನ್ ಬೇಗ್?

ಬೆಂಗಳೂರು: ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ರೋಷನ್ ಬೇಗ್ ಅವರು ಐಎಂಎ ಪ್ರಕರಣದಲ್ಲಿ ಬಂಧಿತರಾಗುತ್ತಾರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

ಹೌದು. ಐಎಂಎ ಹಗರಣದಲ್ಲಿ ಎಸ್ ಐಟಿ ಅಧಿಕಾರಿಗಳು ರೋಷನ್ ಬೇಗ್ ವಿಚಾರಣೆ ಮಾಡೋ ಸಾಧ್ಯತೆ ಇದೆ. ಅದಕ್ಕಾಗಿ ಈಗಾಗಲೇ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ರೋಷನ್ ಬೇಗ್ ಅನ್ನು ಯಾವಾಗ ಬೇಕಿದ್ರೂ ವಿಚಾರಣೆಗೆ ಕರೆಯಬಹುದು ಎಂದು ವರದಿಯಾಗಿದೆ.

ರೋಷನ್ ಬೇಗ್ ಹಾಗೂ ಮನ್ಸೂರ್ ವ್ಯವಹಾರಿಕ ಸಂಬಂಧದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಕೆಲವೊಂದು ಬ್ಯಾಂಕ್ ವ್ಯವಹಾರದಲ್ಲಿ ರೋಷನ್ ಬೇಗ್ ನಿಕಟ ಸಂಪರ್ಕ ಹೊಂದಿರೋದು ಗೊತ್ತಾಗಿದೆ. ಮುಂಬೈನಲ್ಲಿ ನಡೆದ ಮಗ ರುಮಾನ್ ಬೇಗ್ ಮದುವೆ ಚಾರ್ಟೆಡ್ ಪ್ಲೈಟ್ ನೀಡಿದ್ದು, ಚುನಾವಣೆಗಾಗಿ ಫಂಡಿಂಗ್ ಮಾಡಿಸಿಕೊಂಡಿದ್ದು, ರೋಷನ್ ಬೇಗ್ ಕುಟುಂಬದವರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಿದ್ದು ಹಾಗೂ ಬೇಗ್ ಮಾಲೀಕತ್ವದಲ್ಲಿದ್ದ ಸಿಯಾಸತ್ ಪೇಪರ್ ನಡೆಸಿದ್ದು ಎಲ್ಲದರ ವ್ಯವಹಾರಿಕ ಸಂಬಂಧ ಮಾಹಿತಿ ಕಲೆ ಹಾಕಿದ್ದಾರೆ.

ಈ ಎಲ್ಲಾ ಮಾಹಿತಿಯನ್ನು ಆಧರಿಸಿ ಬೇಗ್ ಅವರನ್ನು ಯಾವ ದಿನದಲ್ಲಿಯಾದ್ರೂ ವಿಚಾರಣೆಗೆ ಒಳಪಡಿಸಬಹುದು. ಆರೋಪಿ ಮನ್ಸೂರ್ ಖಾನ್ ರೋಷನ್ ಬೇಗ್ ವಿಚಾರ ಹೇಳಿದ್ದರಿಂದ ಈ ಎಲ್ಲಾ ಮಾಹಿತಿಯ ಬಗ್ಗೆ ಪತ್ತೆ ಮಾಡಲಾಗುತ್ತಿದೆ. ಜೊತೆಗೆ ವಿಚಾರಣೆ ನಡೆಸಿ ಬಳಿಕ ಸತ್ಯಾಸತ್ಯತೆ ಪರೀಕ್ಷೆ ಮಾಡಲಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ವಿಚಾರಣೆಯ ಬಳಿಕ ರೋಷನ್ ಬೇಗ್ ಬಂಧನವಾದ್ರೂ ಆಶ್ಚರ್ಯ ಇಲ್ಲ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೆಣಕಿದ ರೋಷನ್ ಬೇಗ್‍ಗೆ ಹಗ್ಗವೂ ಹಾವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ