ಮುಂಬೈ, ಜೂ.19- ಅವನತಿಯ ಅಂಚಿನಲ್ಲಿರುವ ಸ್ಪರ್ಮ್ ತಿಮಿಂಗಲ ಪ್ರಬೇಧ ವಾಂತಿಗೂ ಮಾರುಕಟ್ಟೆಯಲ್ಲಿ ಕೋಟಿ ರೂ. ಮೌಲ್ಯವಿದೆ.
ಮುಂಬೈನಲ್ಲಿ ತಿಮಿಂಗಿಲದ ತ್ಯಾಜ್ಯ ಅಂಬೆರ್‍ಗ್ರಿಸ್ ಮಾರಾಟ ಮಾಡಲು ಹವಣಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ 1.7ಕೋಟಿ ರೂ. ಮೌಲ್ಯದ 1.3ಕೆಜಿ ಮಾಲನ್ನು ವಶ ಪಡಿಸಿಕೊಂಡಿದ್ದಾರೆ.
ರಾಹುಲ್ ದುಲ್ಪರ್(53) ಬಂಧಿತ ಆರೋಪಿ.
ಮುಂಬೈನ ವಿದ್ಯಾವಿಹಾರನ ಕಾಮಾಲೈನ್‍ನಲ್ಲಿ ಅಂಬೆರ್‍ಗ್ರಿಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಈತನನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದರು.
ಅಂಬೆರ್‍ಗ್ರಿಸ್-ಇದು ಸ್ಪರ್ಮ್ ತಿಮಿಂಗಿಲದ ಕರುಳಿನಲ್ಲಿ ಉತ್ಪತ್ತಿಯಾಗುವ ಮೇಣದಂತಹ ವಸ್ತು ಇದನ್ನು ಕೆಲವು ಸಂದರ್ಭಗಳಲ್ಲಿ ತಿಮಿಂಗಿಲ ವಾಂತಿ ರೂಪದಲ್ಲಿ ಹೊರಹಾಕುತ್ತದೆ. ಈ ಪದಾರ್ಥಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಬಾರಿ ಮೌಲ್ಯವಿದೆ.
ಆಲ್ಕೋಹಾಲ್, ಕ್ಲೋರೋಫಾರಂ, ಈಥೇರ್ ಮತ್ತು ಇತರ ಬಾಷ್ಪಶೀಲ ತೈಲಗಳಲ್ಲಿ ಇದು ಸುಲಭವಾಗಿ ಕರಗುತ್ತದೆ. ಇದನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹೀಗಾಗಿ ಇದಕ್ಕೆ ಮಾರುಕಟ್ಟೆಯಲ್ಲಿ ಭಾರಿ ಮೌಲ್ಯವಿದೆ.
ಬಂಧಿತ ಆರೋಪಿ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಮತ್ತು ಸಾಗರ ಸಂಕುಲಗಳ ರಕ್ಷಣಾ ನಿಯಮಗಳ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಲಾಗಿದೆ.