17ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧ ಆಯ್ಕೆಯಾದ ಓಂ ಬಿರ್ಲಾ

ನವದೆಹಲಿ, ಜೂ.19- ಎನ್‍ಡಿಎಯಿಂದ ನೇಮಕಗೊಂಡ ಓಂ ಬಿರ್ಲಾ(56) ಇಂದು 17ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧ ಆಯ್ಕೆಯಾದರು. ಹಲವು ರಾಜಕೀಯ ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿ ಗೊತ್ತುವಳಿ ಮಂಡಿಸಿದವು. ಇದರಿಂದ ಓಂ ಬಿರ್ಲಾ ಸರ್ವಾನುಮತದಿಂದ ಲೋಕಸಭಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಲೋಕಸಭಾ ಸ್ಫೀಕರ್ ಸ್ಥಾನಕ್ಕೆ ಬೇರೆ ಯಾವ ಅಭ್ಯರ್ಥಿ ಕಣದಲ್ಲಿ ಇರಲಿಲ್ಲ. ರಾಜಸ್ತಾನದ ಕೋಟಾ-ಬಂಡಿ ಸಂಸದ ಓಂ ಬಿರ್ಲಾ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಡಿಸಿದ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಬಿರ್ಲಾ ಪರವಾಗಿ ಒಟ್ಟು 13 ನಿರ್ಣಯಗಳು ಮಂಡನೆಯಾದವು. ಸಭಾ ನಾಯಕರೂ ಆಗಿರುವ ಪ್ರಧಾನಿ ಮೋದಿ ಅವರಿಂದ ಗೊತ್ತುವಳಿ ಮಂಡಿಸಿದ ನಂತರ ಹಂಗಾಮಿ ಸ್ಪೀಕರ್ ವಿಜೇಂದ್ರ ಕುಮಾರ್ ಅವರು ಬಿರ್ಲಾ ಅವರ ಲೋಕಸಭಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು. ನಂತರ ನೂತನ ಸ್ಫೀಕರ್, ಸಭಾಧ್ಯಕ್ಷರ ಪೀಠದಲ್ಲಿ ಪದಗ್ರಹಣ ಮಾಡಿದರು.

ಸರ್ವಾನುಮತದಿಂದ ಆಯ್ಕೆಯಾದ ಬಿರ್ಲಾ ಅವರಿಗೆ ಬಿಜೆಪಿ, ಕಾಂಗ್ರೆಸ, ಡಿಎಂಕೆ, ಟಿಎಂಸಿ ಮತ್ತು ಇತರ ಪಕ್ಷಗಳ ಮುಖಂಡರು ಪೋಡಿಯಂಗೆ ತೆರಳಿ ಅಭಿನಂದಿಸಿದರು.

ಮೂರು ಬಾರಿ ಶಾಸಕರಾಗಿದ್ದ ಬಿರ್ಲಾ, 2014ರಲ್ಲಿ ಪ್ರಥಮ ಬಾರಿಗೆ ಲೋಕಸಭೆಗೆ ಚುನಾಯಿತರಾಗಿದ್ದರು, ಈ ವರ್ಷ ರಾಜಸ್ತಾನದ ಕೋಟಾ-ಬಂಡಿ ಕ್ಷೇತ್ರದಿಂದ ಪುನರಾಯ್ಕೆಯಾದರು.

ಮೋದಿ, ಶಾ ಅಚ್ಚರಿಯ ಆಯ್ಕೆ : ಅತ್ಯಂತ ಜವಾಬ್ದಾರಿಯುತವಾದ ಲೋಕಸಭಾಧ್ಯಕ್ಷ ಸ್ಥಾನವನ್ನು ನಿರ್ವಹಿಸಲು ಹಿರಿಯರು ಮತ್ತು ಅನುಭವಿ ಸಂಸದೀಯ ಪಟುಗಳನ್ನು ಆಯ್ಕೆ ಮಾಡುವುದು ವಾಡಿಕೆ. ಈ ಹಿಂದೆ ಲೋಕಸಭಾ ಸ್ಪೀಕರ್ ಆಗಿದ್ದ ಸುಮಿತ್ರಾ ಮಹಾಜನ್ ಎಂಟು ಬಾರಿ ಸಂಸದರಾಗಿದ್ದರು. ಆದರೆ ಕಡಿಮೆ ಅನುಭವದ ಬಿರ್ಲಾ ಅವರನ್ನು ಎನ್‍ಡಿಎ ಒಮ್ಮತದ ಅಭ್ಯರ್ಥಿಯಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವರೂ ಆದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇಮಕ ಮಾಡಿ ನಿನ್ನೆಯೇ ಅಚ್ಚರಿ ಮೂಡಿಸಿದ್ದರು. ಬಿರ್ಲಾ ಮೋದಿ ಮತ್ತು ಶಾ ಅವರಿಗೆ ಪರಮಾಪ್ತರು.

ವಿದ್ಯಾರ್ಥಿ ಮುಖಂಡರಾಗಿ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಬಿರ್ಲಾ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. 1991ರಲ್ಲಿ ಬಿಜೆಪಿಗೆ ಸಾಮಾನ್ಯ ಕಾರ್ಯಕರ್ತರಾಗಿ ಸೇರ್ಪಡೆಯಾದ ಅವರು 2003ರವರೆಗೂ ಬಿಜೆಪಿ ಯುವ ಮೋರ್ಚಾದಲ್ಲಿ ವಿವಿಧ ಹುದ್ದೆಗಳಲ್ಲಿ ಗುರುತಿಸಿಕೊಂಡು ರಾಜ್ಯ ಬಿಜೆಪಿ ವೈಎಂ ಘಟಕದ ಅಧ್ಯಕ್ಷರಾದರು. ಸಂಘಟನಾ ಚತುರರಾಗಿದ್ದ ಅವರು ನಂತರ ರಾಷ್ಟ್ರ ಮಟ್ಟದ ಯುವ ಮೋರ್ಚಾ ಉಪಾಧ್ಯಕ್ಷರಾದರು.

ನಂತರ 2003ರಲ್ಲಿ ರಾಜಸ್ತಾನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಬಿರ್ಲಾ ಜಯಶೀಲರಾದರು. ನಂತರ 2008 ಮತ್ತು 2013ರಲ್ಲಿ ಅದೇ ಕ್ಷೇತ್ರದಿಂದ ಪುನರಾಯ್ಕೆಯಾದರು.

2014ರಲ್ಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾದ ಅವರ 2019ರ ಚುನಾವಣೆಯಲ್ಲೂ ಭರ್ಜರಿ ಗೆಲುವು ಸಾಧಿಸಿದರು. ಕಾಂಗ್ರೆಸ್ ರಾಮ್‍ನಾರಾಯಣ್ ಮೀನಾ ಅವರನ್ನು 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದರು.

ಎರಡನೆ ಬಾರಿ ಸಂಸದರಾದರೂ ಇವರು ಅತ್ಯುತ್ತಮ ಸಂಸದೀಯ ಪಟು ಎಂದು ಗುರುತಿಸಿಕೊಂಡರು. ಇವರು ಸದನದಲ್ಲಿ ಶೇ.86ರಷ್ಟು ಹಾಜರಾಗಿ, 671 ಪ್ರಶ್ನೆಗಳನ್ನು ಕೇಳಿ, 163 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ 16ನೇ ಲೋಕಸಭೆಯಲ್ಲಿ ಆರು ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಿದ್ದರು.

ಸಂಸತ್ತಿನ ಇಂಧನ ಕುರಿತ ಸ್ಥಾಯಿ ಸಮಿತಿ, ಅರ್ಜಿಗಳ ಕುರಿತ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿಯೂ ಬಿರ್ಲಾ ಕಾರ್ಯನಿರ್ವಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ