ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಸ್ತಾಪಕ್ಕೆ ಜಂಟಿ ಕಾರ್ಯತಂತ್ರ ರೂಪಿಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷಗಳ ಸಭೆ ನಿನ್ನೆ ದೆಹಲಿಯಲ್ಲಿ ನಡೆದಿತ್ತು. ಆದರೆ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಪ್ರತಿಪಕ್ಷಗಳು ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಒಂದು ದೇಶ, ಒಂದು ಚುನಾವಣೆ ಪರಿಕಲ್ಪನೆ ಕುರಿತು ಮೋದಿಯವರು ಸರ್ವಪಕ್ಷ ಸಭೆ ಆಹ್ವಾನಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ತರಾತುರಿಯಿಂದ ನಿರ್ಧಾರ ಕೈಗೊಳ್ಳುವ ಬದಲು ಶ್ವೇತಪತ್ರ ಹೊರಡಿಸಿ ಎಂದು ಕೇಳಿದ್ದಾರೆ. ಲೋಕಸಭೆಯಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರ ಸಂಖ್ಯೆ 22 ಇದ್ದು ಅವರ ಸಲಹೆ, ಅಭಿಪ್ರಾಯಗಳು ಪ್ರಮುಖವಾಗುತ್ತದೆ.
ನಿನ್ನೆಯ ಸಭೆಯಲ್ಲಿ ಪ್ರತಿಪಕ್ಷಗಳು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಹಲವು ವಿರೋಧ ಪಕ್ಷಗಳ ನಾಯಕರು ಸಭೆಗೆ ಹಾಜರಾಗಿರಲಿಲ್ಲ. ಡಿಎಂಕೆ ನಾಯಕರಾದ ಕನ್ನಿಮೋಳಿ, ಟಿ ಆರ್ ಬಾಲು, ಸಿಪಿಐಯ ಡಿ ರಾಜಾ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ ಉಪಸ್ಥಿತರಿದ್ದರು. ಮೋದಿಯವರು ಕರೆದಿರುವ ಸಭೆಗೆ ಹೋಗಬೇಕೆ, ಬೇಡವೇ ಎಂಬುದನ್ನು ಇಂದು ನಡೆಯುವ ಸಭೆಯಲ್ಲಿ ವಿರೋಧ ಪಕ್ಷಗಳು ನಿರ್ಧರಿಸುವ ಸಾಧ್ಯತೆಯಿದೆ.
ನಿನ್ನೆಯ ಸಭೆಯಲ್ಲಿ ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾಗಿರುವ ರಾಜಸ್ತಾನ ಸಂಸದ ಓಂ ಬಿರ್ಲಾ ಅವರ ಆಯ್ಕೆಯನ್ನು ವಿರೋಧಿಸದಿರುವ ಬಗ್ಗೆ ನಿರ್ಧರಿಸಲಾಯಿತು. ಇದಕ್ಕೂ ಮುನ್ನ ನಿನ್ನೆ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷ ಸಭೆಯಲ್ಲಿ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಇದ್ದರು.
ಪಶ್ಚಿಮ ಬಂಗಾಳದಿಂದ 5 ಬಾರಿ ಸಂಸದರಾಗಿರುವ ಅಧಿರ್ ರಂಜನ್ ಚೌಧರಿ ಕಾಂಗ್ರೆಸ್ ಪಕ್ಷದ ಲೋಕಸಭೆ ನಾಯಕರಾಗಿ ನೇಮಿಸಲಾಗಿದೆ. ಕೇರಳದ ಸಂಸದ ಕೆ ಸುರೇಶ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಯಿತು. ಈ ಕುರಿತು ಕಾಂಗ್ರೆಸ್ ಲೋಕಸಭೆ ಕಾರ್ಯದರ್ಶಿಗಳಿಗೆ ತಿಳಿಸಿದೆ.
ಪ್ರಧಾನಿ ಮೋದಿಯವರು ಇಂದು ಬೆಳಗ್ಗೆ ಕರೆದಿರುವ ಸಭೆಯಲ್ಲಿ 2022ಕ್ಕೆ ಸ್ವಾತಂತ್ರ್ಯ ಸಿಕ್ಕಿ 75ನೇ ವರ್ಷಾಚರಣೆ ಬಗ್ಗೆ ಮತ್ತು 150ನೇ ಮಹಾತ್ಮಾ ಗಾಂಧಿ ಜಯಂತಿ ಆಚರಣೆ ಬಗ್ಗೆ ಚರ್ಚೆ ನಡೆಸಲಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಕಾನೂನು ಆಯೋಗ ಒಟ್ಟಿಗೆ ಚುನಾವಣೆ ನಡೆಸುವುದಕ್ಕೆ ಶಿಫಾರಸು ಮಾಡಿತ್ತು.