ಪಾಟ್ನಾ/ಮುಜಫರ್‍ಪುರ್, ಜೂ. 19- ಮಾರಕ ಎನ್ಸೆಫಾಲಿಟೆಸ್ (ಮಿದುಳು ಜ್ವರ) ಹೆಮ್ಮರಿಯಿಂದ ಬಿಹಾರದ ಮುಜಫರ್‍ಪುರ್ ಮತ್ತು ಇತರ ಜಿಲ್ಲೆಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ 146ಕ್ಕೆ ಏರಿದೆ. ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಏರುತ್ತಿದ್ದು ತೀವ್ರ ಅಸ್ವಸ್ಥರಾಗಿರುವ ಮಕ್ಕಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಈ ನಡುವೆ ಈ ಮಾರಕ ಸೋಂಕು ಹಬ್ಬಲು ಲಿಚ್ಚಿ ಹಣ್ಣು ಕಾರಣವೇ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ.
ಮುಜಫರ್‍ಪುರ ಜಿಲ್ಲೆಯೊಂದರಲ್ಲಿ ಎನ್ಸೆಫಾಲಿಟೆಸ್ ಸೋಂಕಿಗೆ ಈವರೆಗೆ 119 ಮಕ್ಕಳು ಮೃತಪಟ್ಟಿದ್ದಾರೆ. ವಿವಿಧ ಜಿಲ್ಲೆಗಳಲ್ಲೂ ಈ ರೋಗ ಉಲ್ಬಣಗೊಂಡಿದ್ದು, ವೈಶಾಲಿ ಜಿಲ್ಲೆಯಲ್ಲಿ 12, ಬೇಗುಸರೈನಲ್ಲಿ 6, ಸಮಷ್ಠಿಪುರದಲ್ಲಿ 5 ಮತ್ತು ಮೋತಿಹಾರನಲ್ಲಿ 2 ಮಕ್ಕಳು ಮೃತಪಟ್ಟಿದ್ದಾರೆ.
500ಕ್ಕೂ ಹೆಚ್ಚು ಮಕ್ಕಳಿಗೆ ಈ ಸೋಂಕು ತಗುಲಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಅಪೌಷ್ಠಿಕತೆ ಮತ್ತು ಕುಪೋಷಣೆಯಿಂದ ನರಳುತ್ತಿರುವ ಮಕ್ಕಳು ಲಿಚ್ಚಿ ಹಣ್ಣು ಸೇವಿಸಿದಾಗ ರಕ್ತದಲ್ಲಿನ ಗ್ಲುಕೋಸ್(ಸಕ್ಕರೆ ಅಂಶ) ಗಣನೀಯವಾಗಿ ಕಡಿಮೆಯಾಗಿ ಸಾವಿಗೀಡಾಗುತ್ತಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಪಾಟ್ನಾದ ಪ್ರಯೋಗಾಲಯದಲ್ಲಿ ಈ ಬಗ್ಗೆ ಸಂಶೋಧನೆ ಮುಂದುವರೆದಿದ್ದು, ಇನ್ನೆರಡು ದಿನಗಳಲ್ಲಿ ಅಧಿಕೃತ ವರದಿ ಲಭಿಸಲಿದೆ.
ಮುಜಫರ್‍ಪುರ ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ನಿನ್ನೆ ಭೇಟಿ ನೀಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮುತ್ತಿಗೆ ಹಾಕಿದ ಘಟನೆಯೂ ನಡೆದಿತ್ತು.
ದಾಖಲಾಗಿರುವ 300ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ವಿಚಾರಿಸಲು ಎಸ್‍ಕೆಎಮ್‍ಎಚ್ ಆಸ್ಪತ್ರೆಗೆ ಬಂದ ಮುಖ್ಯಮಂತ್ರಿ ಅವರನ್ನು ಪೋಷಕರು ಮತ್ತು ಸಾರ್ವಜನಿಕರು ಸುತ್ತುವರೆದು ಪ್ರಶ್ನೆಗಳ ಸುರಿಮಳೆಗೈದರು. ನಮ್ಮ ಮಕ್ಕಳು ಮಾರಕ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಆದರೂ ಸರ್ಕಾರ ಸೋಂಕು ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಆರೋಗ್ಯ ಸಚಿವ ಮಂಗಲ ಪಾಂಡೆ ರಾಜೀನಾಮೆ ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಮುಂದಾದಾಗ ಮಾತಿನ ಚಕಮಕಿ ನಡೆದು ಕೆಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.