ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ-ಯೋದರೊಬ್ಬರು ಹುತಾತ್ಮ-ಸೇನಾಧಿಕಾರಿ ಹುತಾತ್ಮ- ಎಲ್‍ಇಟಿ ಉಗ್ರ ಸಜ್ಜದ್ ಅಹಮ್ಮದ್ ಭಟ್ ಹತ್ಯೆ

ಶ್ರೀನಗರ, ಜೂ.18- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿರುವಂತೆಯೇ ಅವರನ್ನು ನಿಗ್ರಹಿಸುವ ಸೇನಾಪಡೆಗಳ ಕಾರ್ಯಾಚರಣೆಯೂ ಬಿರುಸಾಗಿದೆ.
ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬೀಜ್‍ಬೇಹರಾದಲ್ಲಿ ಉಗ್ರರು ಮತ್ತು ಯೋಧರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ.

ಈ ಎನ್‍ಕೌಂಟರ್‍ನಲ್ಲಿ ಇಬ್ಬರು ಭಯೋತ್ಪಾದಕರ ಹತರಾಗಿದ್ದು, ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಸುಳಿವಿನ ಮೇರೆ ಯೋಧರು ಆ ಪ್ರದೇಶವನ್ನು ಸುತ್ತುವರೆದಾಗ ಗುಂಡಿನ ಚಕಮಕಿ ನಡೆಯಿತು.

ಎನ್‍ಕೌಂಟರ್‍ನಲ್ಲಿ ಯೋಧರು ಇಬ್ಬರು ಉಗ್ರರರನ್ನು ಹೊಡೆದುರುಳಿಸಿದರು. ಆದರೆ ಈ ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾದರು.
ಹತರಾದ ಉಗ್ರರದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೈನಿಕರು ಮತ್ತು ಉಗ್ರರ ನಡುವೆ ಕಾದಾಟ-ಸೇನಾಧಿಕಾರಿ ಹುತಾತ್ಮ
ಶ್ರೀನಗರ, ಜೂ.18- ಉಗ್ರರು ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಮೇಜರ್ ಮೃತಪಟ್ಟು ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆ ಬಳಿ ಉಗ್ರರು ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು. ಈ ವೇಳೆ ಅವರೆಲ್ಲರನ್ನೂ ಶರಣಾಗುವಂತೆ ಭಾರತೀಯ ಸೇನೆ ಸುತ್ತುವರಿಯಿತು.

ಈ ವೇಳೆ ಉಗ್ರರು ಶರಣಾಗುವ ಬದಲು ಸೇನಾ ಯೋಧರ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದರು. ಪ್ರತಿಯಾಗಿ ಭಾರತೀಯ ಸೇನೆ ಕೂಡ ಉಗ್ರರಿಗೆ ಗುಂಡಿನ ಪ್ರತ್ಯುತ್ತರವನ್ನೇ ನೀಡಿತು.

ಹೀಗೆ ಎರಡೂ ಕಡೆ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಮೇಜರ್ ವೀರ ಮರಣವನ್ನಪ್ಪಿದ್ದಾರೆ. ಇಬ್ಬರು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆಯಷ್ಟೇ ಕಣಿವೆ ರಾಜ್ಯದಲ್ಲಿ ಉಗ್ರರು ಸೇನಾ ಯೋಧರ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸಿದ್ದರು. ಈ ವೇಳೆ ಓರ್ವ ಯೋಧ ಹತನಾಗಿದ್ದ.

ಎಲ್‍ಇಟಿ ಉಗ್ರ ಸಜ್ಜದ್ ಅಹಮ್ಮದ್ ಭಟ್ ಹತ್ಯೆ
ಶ್ರೀನಗರ, ಜೂ.18- ಭಾರತೀಯ ಸೇನಾಪಡೆ ಇಂದು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಜ್ಜದ್ ಅಹಮ್ಮದ್ ಭಟ್‍ನನ್ನು ಹತ್ಯೆಗೈಯ್ಯಲಾಗಿದೆ.

ಕಳೆದ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿದ ಮಾಸ್ಟರ್ ಮೈಂಡ್ ಉಗ್ರ ಇದೇ ಸಜ್ಜದ್ ಅಹಮ್ಮದ್ ಭಟ್.

ಜೈಷ್-ಎ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಆಗಿದ್ದ ಸಜ್ಜದ್ ಅಹಮ್ಮದ್ ಭಟ್ ಮೋಸ್ಟ್ ವಾಂಟೆಡ್ ಉಗ್ರನೂ ಹೌದು. ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದ್ದ ಟಾಪ್-10 ಉಗ್ರರ ಹಿಟ್‍ಲಿಸ್ಟ್‍ನಲ್ಲಿ ಈತನೂ ಕೂಡ ಇದ್ದ.

ಸಜ್ಜದ್ ಅಹಮ್ಮದ್ ಭಟ್ ಹತ್ಯೆಯಿಂದಾಗಿ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಬಹುದೊಡ್ಡ ಬೇಟೆಯನ್ನೇ ಆಡಿದೆ. ಇಂದು ಬೆಳಗ್ಗೆ ಅನಂತನಾಗ್ ಜಿಲ್ಲೆಯ ಮರ್ಹಾಮಾ ಎಂಬಲ್ಲಿ ಇಬ್ಬರು ಉಗ್ರರು ಮನೆಯೊಂದರಲ್ಲಿ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಹೊರಬಿತ್ತು.

ಈ ಮಾಹಿತಿ ಆಧರಿಸಿ ಸೇನಾಪಡೆ ಮೊದಲು ಉಗ್ರರಿಗೆ ಶರಣಾಗುವಂತೆ ಸೂಚನೆ ಕೊಟ್ಟಿತು. ಇದಕ್ಕೆ ಪ್ರತಿಯಾಗಿ ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಹೀಗಾಗಿ ಸೇನೆ ಮತ್ತು ಉಗ್ರರ ನಡುವೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಸಜ್ಜನ್ ಅಹಮ್ಮದ್ ಭಟ್ ಮತ್ತು ಮತ್ತೋರ್ವ ಉಗ್ರ ಹತನಾಗಿದ್ದಾನೆ.

ಕಳೆದ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ ಪುಲ್ವಾಮಾ ಸಮೀಪದ ಲೆತ್ಪೋರಾ ಎಂಬಲ್ಲಿ ಸಿಆರ್‍ಪಿಎಫ್ ಯೋಧರು ಬರುತ್ತಿದ್ದ ವಾಹನವನ್ನು ಗುರಿಯಾಗಿಟ್ಟುಕೊಂಡು 250 ಕೆಜಿ ಆರ್‍ಡಿಎಕ್ಸ್ ಬಾಂಬ್‍ಗಳು ತುಂಬಿದ್ದ ಮಾರುತಿ ಇಕೋಕಾರ್ ಡಿಕ್ಕಿ ಹೊಡೆಸಿದ.

ಪರಿಣಾಮ 40 ಸಿಆರ್‍ಪಿಎಫ್ ಯೋಧರು ಪ್ರಾಣತ್ಯಾಗ ಮಾಡಿದ್ದರು. ಈ ಘಟನೆ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿತ್ತು.ಫೆ.25ರಂದು ಎಕೆ-47 ಬಂದೂಕು ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಈತ ಪ್ರತ್ಯಕ್ಷನಾಗಿದ್ದ.

ನಾನು ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯನ್ನು ಸೇರಿಕೊಂಡಿದ್ದೇನೆ. ಪುಲ್ವಾಮಾದ ಬಳಿ ನಡೆದ ಘಟನೆಗೆ ನಾನೇ ಕಾರಣಕರ್ತ ಎಂದು ಹೇಳಿಕೊಂಡಿದ್ದ. ಅಲ್ಲದೆ, ಅಫ್ಜಲ್‍ಗುರು ಎಂಬ ಕೋಡ್‍ವರ್ಡ್ ನೀಡಿ ನಾವು ಆತ್ಮಾಹುತಿ ದಳದಲ್ಲಿದ್ದೇವೆ ಎಂಬುದನ್ನು ಬಹಿರಂಗಪಡಿಸಿದ್ದ.

ಈತನ ಚಲನ-ವಲನಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದ ಭಾರತೀಯ ಸೇನೆ ಗುಪ್ತಚರ ವಿಭಾಗದ ಮೂಲಕ ಎಲ್ಲೆಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾನೆಂಬುದನ್ನು ಪತ್ತೆಹಚ್ಚಿತ್ತು.

ಪುಲ್ವಾಮಾ ಘಟನೆಗೆ ಪ್ರತೀಕಾರವಾಗಿ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲ್‍ಕೋಟ್ ಬಳಿ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ ನೂರಾರು ಉಗ್ರರನ್ನು ಹತ್ಯೆ ಮಾಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ