ಬೆಂಗಳೂರು, ಜೂ.18-ಬೆಂಗಳೂರು ನಗರ ಜಿಲ್ಲಾಧಿಕಾರಿ ಇಂದು ಸರ್ಕಾರಿ ಆಸ್ಪತ್ರೆ ಮತ್ತು ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ವೇಳೆ ಹಲವು ಅಧ್ವಾನಗಳು ಪತ್ತೆಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ವಿತರಣೆ ಮಾಡಿರುವ ಹಗರಣವೊಂದು ಬೆಳಕಿಗೆ ಬಂದಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್ಶಂಕರ್ ಅವರು ಸಾರ್ವಜನಿಕರ ಅಹವಾಲನ್ನು ಆಧರಿಸಿ ಇಂದು ಅನಿರೀಕ್ಷಿತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನರಕ ಸದೃಶ ವಾತಾವರಣವೇ ಎದುರಾಗಿತ್ತು.
ಇನ್ನು ತಹಶೀಲ್ದಾರ್ ಕಚೇರಿಯಂತೂ ದಿಕ್ಕು ದಿವಾಳಿಯಿಲ್ಲದೆ ಸಾರ್ವಜನಿಕರ ಸಮಸ್ಯೆಗಳು ಅನಾಥವಾಗಿದ್ದವು. ಎರಡೂ ಕಡೆ ವ್ಯವಸ್ಥೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಕೆಂಡಾಮಂಡಲರಾದರಲ್ಲದೆ, ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಶಾರದಮ್ಮ ಅವರನ್ನು ಅಮಾನತುಗೊಳಿಸಿದರು.
ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ಹಂಚಿಕೆ ಮಾಡುತ್ತಿದ್ದ ಫಾರ್ಮಸಿಸ್ಟ್ ಪ್ರಿಯದರ್ಶಿನಿ ಮತ್ತು ವನಜಾಕ್ಷಿ ಅವರನ್ನು ಅಮಾನತುಗೊಳಿಸಲು ಆದೇಶಿಸಿದರಲ್ಲದೆ, ವೈದ್ಯಕೀಯ ಅಧೀಕ್ಷಕರ ಗೈರು ಹಾಜರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ. ಎರಡೂ ಕಚೇರಿಗಳಲ್ಲಿ ಬಹಳಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಅನಧಿಕೃತವಾಗಿ ಗೈರು ಹಾಜರಾಗಿದ್ದರಿಂದ ಹಾಜರಾತಿ ಪುಸ್ತಕ ಜಪ್ತಿ ಮಾಡಿದ ಜಿಲ್ಲಾಧಿಕಾರಿಗಳು ಎಲ್ಲರಿಗೂ ನೋಟೀಸ್ ನೀಡಲು ಸೂಚಿಸಿದ್ದಾರೆ.
ಅವಧಿ ಮೀರಿದ ಔಷಧಿ ಬಳಕೆ:
ರೋಗ ನಿರೋಧಕ ಔಷಧಿಗಳಾಗಿ ಬಳಕೆ ಮಾಡುವ ಎಂಥ್ರೋಮೈಸಿನ್, ಅಮ್ಯಾಕ್ಸಿ ಓರಲ್ ಸಸ್ಪೆಷನ್ ಸಿರಪ್ಗಳು ಅವಧಿ ಮುಗಿದಿದ್ದರೂ ಬಳಕೆ ವಿತರಿಸುತ್ತಿರುವುದನ್ನು ಗಮನಿಸಿ ಕೂಡಲೇ ಜಿಲ್ಲಾಧಿಕಾರಿಗಳು ಅದನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ವಿವರಣೆ ಕೇಳಲು ಪ್ರಯತ್ನಿಸಿದರೂ ಹಿರಿಯ ದಾಸ್ತಾನು ಮೇಲ್ವಿಚಾರಕರಾದ ಶಕೀಲಾ ಅವರು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಔಷಧಿಗಳನ್ನು ಹಂಚಿಕೆ ಮಾಡುತ್ತಿದ್ದ ಇಬ್ಬರು ಫಾರ್ಮಸಿಸ್ಟ್ಗಳನ್ನು ಅಮಾನತುಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಲಾಗಿದ್ದು, ಈ ಪ್ರಕರಣ ಕುರಿತಂತೆ ವರದಿ ನೀಡಲು ಆದೇಶಿಸಲಾಗಿದೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ನಿನ್ನೆಯಿಂದ ನಾಪತ್ತೆಯಾಗಿದ್ದು, ಅವರು ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲವಾಗಿದೆ. ಆಸ್ಪತ್ರೆ ಸಿಬ್ಬಂದಿ ಅಧಿಕಾರಿಯನ್ನು ಸಮರ್ಥಿಸಿಕೊಳ್ಳುತ್ತಿದ್ದು, ಜಿ.ಪಂ. ಸಭೆಯಲ್ಲಿ ಭಾಗವಹಿಸಲು ತೆರಳಿದ್ದಾರೆ ಎಂಬ ಉತ್ತರ ನೀಡುತ್ತಿದ್ದಾರೆ. ಹಾಗಾಗಿ ಅವರಿಗೆ ಶೋಕಾಸ್ ನೋಟೀಸ್ ನೀಡಲು ಸೂಚಿಸಲಾಗಿದೆ.
ಇಡೀ ಆಸ್ಪತ್ರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಂದ ತುಂಬಿ ತುಳುಕುತ್ತಿತ್ತು.ಆದರೆ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ. ಅನೈರ್ಮಲ್ಯವೂ ತಾಂಡವವಾಡುತ್ತಿತ್ತು.ಇದನ್ನೆಲ್ಲ ಕಂಡ ಜಿಲ್ಲಾಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನೇ ಖುದ್ದಾಗಿ ಆಸ್ಪತ್ರೆಯ ದಾಸ್ತಾನು ಮಳಿಗೆಗೆ ಭೇಟಿ ನೀಡಿದಾಗ ಎಂಥ್ರೋಮೈಸಿನ್, ಅಮ್ಯಾಕ್ಸಿನ್ ಓರಲ್ ಸಸ್ಪೆಷನ್ ಔಷಧಿಗಳು ಅವಧಿ ಮೀರಿದ್ದು, ಅವುಗಳನ್ನು ಜನರಿಗೆ ವಿತರಿಸುತ್ತಿದ್ದುದು ಕಂಡು ಬಂದಿದೆ. ಇದು ಅತ್ಯಂತ ಗಂಭೀರ ವಿಚಾರ. ಅಂಗಡಿಯಲ್ಲಿ ಸೋಪು ಖರೀದಿಸಿದರೂ ಅವಧಿ ಮೀರಿದೆಯೇ ಎಂದು ಪರಿಶೀಲಿಸುತ್ತೇವೆ. ಆದರೆ ಅವಧಿ ಮೀರಿದ ಔಷಧಿಯನ್ನು ಹಂಚಿಕೆ ಮಾಡುತ್ತಿರುವುದು ಕಂಡು ಬಂದಿದೆ. ನಾನು ಅದನ್ನು ಜಪ್ತಿ ಮಾಡಿದ್ದೇನೆ. ಒಂದಷ್ಟು ಸ್ಯಾಂಪಲ್ಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಆರೋಗ್ಯ ಇಲಾಖೆ ಆಯುಕ್ತರಿಗೆ ವರದಿ ನೀಡುತ್ತೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲೇ ಬೇಕಿದೆ ಎಂದು ಹೇಳಿದರು.
ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದಾಗ ಗ್ರೇಡ್ 2 ತಹಶೀಲ್ದಾರ್ ಶಾರದಾ ಅವರು ಕಳೆದ ನಾಲ್ಕು ದಿನಗಳಿಂದ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಅವರ ಮೇಲೆ ಸಾರ್ವಜನಿಕವಾಗಿಯೂ ಸಾಕಷ್ಟು ದೂರುಗಳಿವೆ. ಹೀಗಾಗಿ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಕಂದಾಯ ಸಚಿವರ ಕಚೇರಿಗೆ ವರದಿ ನೀಡುತ್ತೇನೆ ಎಂದು ತಿಳಿಸಿದರು.