ಬೆಂಗಳೂರು, ಜೂ.18- ಬೊಮ್ಮನಹಳ್ಳಿ ವಲಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಅಂಗಡಿಗಳು ಮತ್ತು ಪಿಜಿಗಳ ಮೇಲೆ ದಿಢೀರ್ ದಾಳಿ ನಡೆಸಿದರು.
ಶಾಸಕ ಸತೀಶ್ ರೆಡ್ಡಿ ಹಾಗೂ ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ, ಬಹಳಷ್ಟು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಕವರ್ಗಳನ್ನು ವಶಕ್ಕೆ ಪಡೆದರು.
ಪ್ಲಾಸ್ಟಿಕ್ ಕವರ್ಗಳನ್ನು ನಗರದಲ್ಲಿ ಸಂಪೂರ್ಣವಾಗಿ ನಿಷೇಧಿಸಿದ್ದರೂ ಬೊಮ್ಮನಹಳ್ಳಿ ವಲಯದಲ್ಲಿನ ಅಂಗಡಿಗಳಲ್ಲಿ ರಾಜರೋಷವಾಗಿ ಪ್ಲಾಸ್ಟಿಕ್ ವಸ್ತುಗಳು ಮತ್ತು ಕವರ್ಗಳನ್ನು ಮಾರಾಟ ಮಾಡಲಾಗುತ್ತಿತ್ತು.
ಬೆಳಗ್ಗೆ ಬೊಮ್ಮನಹಳ್ಳಿ ಸುತ್ತಮುತ್ತ ಅಂಗಡಿಗಳ ಮೇಲೆ ದಿಢೀರ್ ದಾಳಿ ಮಾಡಿದ ಪಾಲಿಕೆ ಅಧಿಕಾರಿಗಳು, ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಕಳಪೆ ಪ್ಲಾಸ್ಟಿಕ್ ವಸ್ತುಗಳು, ಕವರ್ಗಳನ್ನು ಮಾರಾಟ ಮಾಡಬಾರದೆಂದು ತಾಕೀತು ಮಾಡಿದರು.
ಇದೇ ವೇಳೆ ಈ ಭಾಗದಲ್ಲಿನ ಕೆಲವು ಪಿಜಿಗಳಿಗೆ ಸತೀಶ್ ರೆಡ್ಡಿ ಮತ್ತು ಪಾಲಿಕೆ ಅಧಿಕಾರಿಗಳು ಭೇಟಿ ಮಾಡಿದರು.ಈ ಸಂದರ್ಭದಲ್ಲಿ ಕೊಳೆತ ತರಕಾರಿ ಮತ್ತು ಕಳಪೆ ಆಹಾರ ಪದಾರ್ಥಗಳನ್ನು ಕಂಡು ಅಧಿಕಾರಿಗಳೇ ಗಾಬರಿಗೊಂಡರು.
ಪಿಜಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಪಿಜಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು, ಉತ್ತಮ ಗುಣಮಟ್ಟದ ಆಹಾರ ಕೊಡುವಂತೆ ತಾಕೀತು ಮಾಡಿದರು.