ಬೆಂಗಳೂರು, ಜೂ.18- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಷಾ ಮತ್ತೆ ಮುಂದುವರಿದಿರುವುದರಿಂದ ಕರ್ನಾಟಕದಲ್ಲೂ ಹಾಲಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನೇ ಕೆಲ ತಿಂಗಳವರೆಗೂ ಮುಂದುವರಿಸಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ.
ಸದ್ಯಕ್ಕೆ ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದೆ ನವೆಂಬರ್ವರೆಗೂ ಅವರನ್ನೇ ಮುಂದುವರಿಸಿದರೆ ಪಕ್ಷದ ಸಂಘಟನೆ ಇನ್ನಷ್ಟು ಭದ್ರವಾಗುತ್ತದೆ ಎಂಬ ತೀರ್ಮಾನಕ್ಕೆ ಬರಲಾಗಿದೆ.
ನವದೆಹಲಿಯಲ್ಲಿ ನಿನ್ನೆ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಅಮಿತ್ ಷಾ ಅವರನ್ನು ಈ ವರ್ಷದ ಅಂತ್ಯದವರೆಗೂ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಸುವುದರ ಜತೆಗೆ ಜೆ.ಪಿ.ನಡ್ಡಾ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಂತೆ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯಿತು. ಬಿಜೆಪಿ ಮತ್ತೆ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಂಡಿದೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಈ ಅಭಿಯಾನದ ಮುಖ್ಯಸ್ಥರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಪ್ರತಿಯೊಂದು ಬೆಳವಣಿಗೆಗಳಿಗೆ ಬೆನ್ನೆಲುಬಾಗಿ ನಿಂತವರೇ ಯಡಿಯೂರಪ್ಪ.
ಪಕ್ಷದ ಸಂಘಟನೆ, ಸದಸ್ಯತ್ವ, ಹೋರಾಟ ಯಾವುದೇ ವಿಷಯದಲ್ಲೂ ಅವರ ಮುಂದಾಳತ್ವದಲ್ಲೇ ಬಿಜೆಪಿ ಮುನ್ನಡೆದಿದೆ. ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಿದರೆ ಸಂಘಟನೆ ಮತ್ತು ಸದಸ್ಯತ್ವ ನೋಂದಣಿ ಅಭಿಯಾನದ ಮೇಲೆ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ ವರಿಷ್ಠರು ಅವರನ್ನೇ ಮುಂದುವರಿಸುವ ತೀರ್ಮಾನಕ್ಕೆ ಬಂದಿದ್ದಾರೆಂದು ತಿಳಿದುಬಂದಿದೆ.
ಹಾಗೆ ನೋಡಿದರೆ ಏಪ್ರಿಲ್ನಲ್ಲೇ ಅಧ್ಯಕ್ಷರ ಬದಲಾವಣೆ ಆಗಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಇದ್ದ ಕಾರಣ ಹೈಕಮಾಂಡ್ ಈ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ನಡೆಯಬಹುದೆಂಬ ನಿರೀಕ್ಷೆ ಬಿಜೆಪಿಯಲ್ಲಿದೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ಯಡಿಯೂರಪ್ಪ ಹೆಗಲಿಗೆ ಸರ್ಕಾರದ ಸಾರಥ್ಯ ಸಿಗಲಿದೆ. ಬಳಿಕವಷ್ಟೇ ಅಧ್ಯಕ್ಷರನ್ನು ಬದಲಾವಣೆ ಮಾಡಲು ಹೈಕಮಾಂಡ್ ಚಿಂತಿಸಿದೆ.
ರೇಸ್ನಲ್ಲಿ ಹಲವರು: ಏಪ್ರಿಲ್ನಲ್ಲೇ ಯಡಿಯೂರಪ್ಪ ಅವರ ಅಧಿಕಾರ ಅವಧಿ ಮುಕ್ತಾಯವಾಗಿದೆ. ಹೀಗಾಗಿ, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಸುದ್ದಿ ಹಬ್ಬಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ 13 ಆಕಾಂಕ್ಷಿಗಳಿದ್ದಾರೆ. ಸಿಟಿ ರವಿ, ಆರ್ ಆಶೋಕ್, ಅರವಿಂದ್ ಲಿಂಬಾವಳಿ, ಬಿ.ಶ್ರೀರಾಮುಲು ಹೆಸರು ಮುಂಚೂಣಿಯಲ್ಲಿದ್ದವು.
ಈ ಬಾರಿ ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಇತ್ತು. ಲಿಂಗಾಯತ ವೀರಶೈವ ಮುಖಂಡರು, ಕುರುಬ ಹೀಗೆ ಜಾತಿ ಲೆಕ್ಕಾಚಾರ ಕೂಡಾ ನಡೆದಿತ್ತು.
ಆದರೆ, ಎಲ್ಲವನ್ನು ಮೀರಿ, ಮುಂದಿನ ಅವಧಿಯಲ್ಲಿ ಅಧಿಕಾರ ಸ್ಥಾಪನೆ ಮಾಡಲು ಬಿಜೆಪಿಗೆ ಬಲ ತುಂಬಬಲ್ಲಂಥವರನ್ನು ಮಾತ್ರ ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿತ್ತು.
76 ವರ್ಷದ ಯಡಿಯೂರಪ್ಪ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನವನ್ನು ಹೊಂದಿದ್ದಾರೆ. ಆದರೆ, ನವೆಂಬರ್ ತನಕ ರಾಜ್ಯಾಧ್ಯಕ್ಷರ ಬದಲಾವಣೆ ಆಗುವುದಿಲ್ಲ.
2016ರಲ್ಲಿ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ರಾಜ್ಯಾಧ್ಯಕ್ಷರ ನೇಮಕ ಪಕ್ಷದ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆ. ಆದ್ದರಿಂದ, ಪಕ್ಷ ಈಗ ರಾಜ್ಯಾಧ್ಯಕ್ಷರ ಬದಲಾವಣೆಗೆ ಕೈ ಹಾಕುವುದಿಲ್ಲ ಎನ್ನಲಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಆದ್ದರಿಂದ, ಬಿಜೆಪಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನೆಚ್ಚರಿಕೆಯ ಹೆಜ್ಜೆ ಇಡಲಿದೆ. ಯಡಿಯೂರಪ್ಪ ನಂತರ ಮುಂದಿನ ಅಧ್ಯಕ್ಷರು ಯಾರು ಎಂಬುದು ಇನ್ನೂ ಖಚಿತವಾಗಿಲ್ಲ.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಆಗುವ ಬದಲಾವಣೆ ಗಮನದಲ್ಲಿಟ್ಟುಕೊಂಡು ಅಧ್ಯಕ್ಷರ ನೇಮಕ ಮಾಡಲಾಗುತ್ತದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ಬದಲಾವಣೆ ಬಗ್ಗೆ ಚರ್ಚೆ ನಡೆದಿತ್ತು. ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹೊಂದಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದಂತೆ ಬದಲಾವಣೆ ಆಗಬೇಕು ಎಂದು ಚರ್ಚೆಯಾಗಿತ್ತು.