ಬೆಂಗಳೂರು, ಜೂ.18- ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಖಾಲಿಯಾಗತೊಡಗಿವೆ. ಸತತ ಬರದಿಂದ ಕಂಗೆಟ್ಟಿರುವ ರಾಜ್ಯದಲ್ಲಿ ಮುಂಗಾರು ಆರಂಭವೇ ವಿಳಂಬವಾಗಿದೆ ಅಲ್ಲದೆ ತೀವ್ರ ಮಳೆ ಕೊರತೆಯನ್ನು ಎದುರಿಸುವಂತಾಗಿದೆ.
ಇದರಿಂದ ಮುಂಗಾರಿನ ಆರಂಭದಲ್ಲೇ ಜಲಾಶಯಗಳು ಖಾಲಿಯಾಗುತ್ತಿವೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಕಾವೇರಿ ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗತೊಡಗಿದ್ದವು.
ರಾಜ್ಯ ಸರ್ಕಾರದ ಉನ್ನತ ಮೂಲಗಳ ಪ್ರಕಾರ ಕಬಿನಿ ಜಲಾಶಯದಲ್ಲಿ ಈ ವೇಳೆಗೆ ಹೆಚ್ಚು ಕಡಿಮೆ ಭರ್ತಿಯಾಗಿತ್ತು. ಗರಿಷ್ಠ 15.67 ಟಿಎಂಸಿ ಅಡಿ ಸಾಮಥ್ರ್ಯದ ಈ ಜಲಾಶಯದಲ್ಲಿ ಸದ್ಯಕ್ಕೆ 2 .29 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ.
ಹಾಗೆಯೇ ಕೆಆರ್ಎಸ್ ಜಲಾಯಶದ ಗರಿಷ್ಠ ಸಾಮಥ್ರ್ಯ 45.5 ಟಿಎಂಸಿ ಅಡಿ. ಪ್ರಸ್ತುತ 6.42 ಟಿಎಂಸಿ ಅಡಿಯಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 20 ಟಿಎಂಸಿಗೂ ಹೆಚ್ಚು ನೀರಿತ್ತು. ಹೆಚ್ಚುಕಡಿಮೆ ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿತ್ತು.
ಕಾವೇರಿ ಜಲಾನಯನ ಭಾಗದ ಮತ್ತೊಂದು ಜಲಾಶಯವಾದ ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮಥ್ರ್ಯ 35.76 ಟಿಎಂಸಿ ಅಡಿ ಆಗಿದೆ. ಈ ಜಲಾಶಯದಲ್ಲಿ ಸದ್ಯಕ್ಕೆ 3.45 ಟಿಎಂಸಿ ಅಡಿಯಷ್ಟು ನೀರಿದೆ.ಕಳೆದ ವರ್ಷ 18 ಟಿಎಂಸಿ ಅಡಿ ನೀರಿತ್ತು.
8.07 ಟಿಎಂಸಿ ಅಡಿ ಸಾಮಥ್ರ್ಯದ ಹಾರಂಗಿ ಜಲಾಶಯದಲ್ಲಿ 1.13 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3 ಟಿಎಂಸಿಯಷ್ಟು ನೀರಿತ್ತು.
ಇದೇ ರೀತಿ ರಾಜ್ಯದ ಪ್ರಮುಖ ಜಲಾಶಯಗಳಾದ ವರಾಹಿ, ಭದ್ರಾ, ತುಂಗಾಭದ್ರ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ ಜಲಾಶಯಗಳ ನೀರು ಖಾಲಿಯಾಗುತ್ತಿದೆ. ಕಳೆದ ವರ್ಷ ಸಂಗ್ರಹವಾಗಿದ್ದ ನೀರಿಗಿಂತ ಶೇ.50ಕ್ಕಿಂತಲೂ ಕಡಿಮೆ ನೀರು ಈ ಜಲಾಶಯಗಳಲ್ಲಿ ಇದೆ.
26.14 ಟಿಎಂಸಿ ಅಡಿ ಸಾಮಥ್ರ್ಯದ ನಾರಾಯಣಪುರ ಜಲಾಶಯದಲ್ಲಿ 7.88 ಟಿಎಂಸಿ ಮಾತ್ರ ನೀರಿದೆ. ಕಳೆದ ವರ್ಷ ಸುಮಾರು 14 ಟಿಎಂಸಿ ನೀರಿತ್ತು.ಮಲಪ್ರಭ, ಜಲಾಶಯದಲ್ಲಿ 0.93 ಅಡಿ ಟಿಎಂಸಿ ನೀರಿದೆ.
ಘಟಪ್ರಭದಲ್ಲಿ 0.41 ಟಿಎಂಸಿ ಅಡಿಯಷ್ಟು ನೀರಿದೆ. ತುಂಗಾಭದ್ರ ಜಲಾಶಯದಲ್ಲಿ 2.19 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಈ ಜಲಾಶಯದಲ್ಲಿ 20ಕ್ಕೂ ಹೆಚ್ಚು ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಉತ್ತರಕರ್ನಾಟಕ ಭಾಗದಲ್ಲಿ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಈ ಜಲಾಶಯಗಳಿಗೆ ನೀರಿನ ಸಂಗ್ರಹಯಾಗಿತ್ತು. ತೀವ್ರ ಬರಪರಿಸ್ಥಿತಿ ಆವರಿಸಿತ್ತು. ಸದ್ಯಕ್ಕೆ ಮುಂಗಾರು ಕೂಡ ದುರ್ಬಲಗೊಂಡಿರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚುವ ಸಾಧ್ಯತೆಗಳು ಇಲ್ಲ.
ಉಳಿದಿರುವ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ತಿಂಗಳ ಅಂತ್ಯದೊಳಗಾದರೂ ಮುಂಗಾರು ಚುರುಕ್ಕಾಗಿ ಉತ್ತಮ ಮಳೆಯಾಗದಿದ್ದರೆ ಬಹುತೇಕ ರಾಜ್ಯದ ಜಲಾಶಯಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುವಂತಾಗುತ್ತದೆ.
ಬೇಸಾಯಕ್ಕಲ್ಲದೆ ಕುಡಿಯುವ ನೀರಿಗೂ ಸಂಕಷ್ಟ ಎದುರಿಸುವಂತಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ಮಳೆಗಾಗಿ ಪೂಜೆ, ಪುನಸ್ಕಾರವನ್ನು ಮುಜರಾಯಿ ದೇವಾಲಯಗಳಲ್ಲಿ ನಡೆಸುತ್ತಿದೆ. ಅದೇ ರೀತಿ ಜನರು ಕೂಡ ಕಪ್ಪೆ ಮದುವೆ ಸೇರಿದಂತೆ ಮಳೆಗಾಗಿ ನಾನಾ ರೀತಿಯ ಪೂಜೆಗಳನ್ನು ಮಾಡುತ್ತಿದ್ದು, ರಾಜ್ಯದೆಲ್ಲೆಡೆ ಮಳೆ ಜಪ ಮಾಡಲಾಗುತ್ತಿದೆ.