ನವದೆಹಲಿ, ಜೂ. 18- ದೇಶದ ವಿವಿಧ ಟೆಲಿವಿಷನ್ ಚಾನೆಲ್‍ಗಳಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಮಕ್ಕಳ ನೃತ್ಯಗಳು ಅಸಭ್ಯ, ಅಶ್ಲೀಲ ಮತ್ತು ಆಕ್ಷೇಪಾರ್ಹವಾಗಿರಬಾರದು ಎಂದು ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆ ಖಡಕ್ ಎಚ್ಚರಿಕೆ ನೀಡಿ ನೋಟಿಸ್‍ಗಳನ್ನು ಜಾರಿಗೊಳಿಸಿದೆ.
ರಾಷ್ಟ್ರಮಟ್ಟದ ಮತ್ತು ಪ್ರಾದೇಶಿಕ ಟಿವಿ ಚಾನೆಲ್‍ಗಳಲ್ಲಿ ಪ್ರಸಾರವಾಗುತ್ತಿರುವ ನೃತ್ಯ ಕಾರ್ಯಕ್ರಮಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಮಕ್ಕಳ ನೃತ್ಯಗಳು ಸಭ್ಯತೆಯ ಎಲ್ಲೆ ಮೀರುತ್ತಿರುವುದನ್ನು ಕೇಂದ್ರ ವಾರ್ತಾ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಚಲನಚಿತ್ರಗಳಲ್ಲಿ ನಟ-ನಟಿಯರು ಮಾಡುವಂತಹ ಪ್ರೌಢನೃತ್ಯಗಳನ್ನು ಮಕ್ಕಳು ಕಾರ್ಯಕ್ರಮಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಆದರೆ ಇದು ಅನೇಕ ಸಂದರ್ಭಗಳಲ್ಲಿ ಅಸಭ್ಯ, ಅಶ್ಲೀಲ ಮತ್ತು ಆಕ್ಷೇಪಾರ್ಹವಾಗಿರುತ್ತವೆ. ಇಂತಹ ನೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಕೇಂದ್ರ ಸರ್ಕಾರ ಎಲ್ಲ ಟಿವಿ ಚಾನೆಲ್‍ಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಕೇಬಲ್ ಟೆಲಿವಿಷನ್ ನೆಟ್‍ವರ್ಕ್ (ರೆಗ್ಯುಲೇಷೆನ್) ಕಾಯ್ದೆ-1995 ಇದರಲ್ಲಿನ ನಿಯಮಗಳು ಮತ್ತು ಟೆಲಿವಿಷನ್ ಪ್ರಸಾರಕ್ಕೆ ಸಂಬಂಧಪಟ್ಟ ನಿಯಮಾವಳಿಗಳನ್ನು ನೋಟಿಸ್‍ನಲ್ಲಿ ಉಲ್ಲೇಖಿಸಿರುವ ವಾರ್ತಾ ಇಲಾಖೆ ಪ್ರೌಢರು ಅಥವಾ ನಟ-ನಟಿಯರು ಮಾಡುವ ನೃತ್ಯಗಳನ್ನು ಮಕ್ಕಳು ರಿಯಾಲಿಟಿ ಶೋಗಳಲ್ಲಿ ಅನುಕರಿಸುವುದರಿಂದ ಎಳೆಮನಸುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ತಿಳಿಸಲಾಗಿದೆ.
ಟಿವಿ ಚಾನೆಲ್‍ಗಳಲ್ಲಿ ಪ್ರಸಾರವಾಗುವ ನೃತ್ಯ ಕಾರ್ಯಕ್ರಮಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಮಕ್ಕಳನ್ನು ಬಳಸುವದಾದರೆ ಅಂತಹ ಶೋಗಳು ಸಭ್ಯತೆಯ ಎಲ್ಲೆಯನ್ನು ಮೀರಬಾರದು, ಅಶ್ಲೀಲತೆ ಮತ್ತು ಆಕ್ಷೇಪಾರ್ಯ ನೃತ್ಯಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದು ಎಂದು ನೋಟಿಸ್‍ನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.