ಮ್ಯಾನ್ಮಾರ್ ಗಡಿಯಲ್ಲಿನ ಉಗ್ರರ ಶಿಬಿರ ಧ್ವಂಸಗೊಳಿಸಿದ ಭಾರತೀಯ ಸೇನೆ

ನವದೆಹಲಿ: ಮ್ಯಾನ್ಮಾರ್ ಗಡಿಯೊಳಗೆ ಅಡಗಿಕೊಂಡಿರುವ ಭಯೋತ್ಪಾದನಾ ಸಂಘಟನೆಗಳ ಶಿಬಿರಗಳ ಮೇಲೆ ಭಾರತ ಮತ್ತು ಮ್ಯಾನ್ಮಾರ್​ ಜಂಟಿಯಾಗಿ ದಾಳಿ ನಡೆಸಿವೆ. ಸನ್​ಶೈನ್​-2 ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರರನ್ನು ಭಾರತೀಯ ಸೇನಾಪಡೆಯ ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೇ 16ರಿಂದ ಜೂನ್​ 8ರ ನಡುವೆ ಭಾರತ ಮತ್ತು ಮ್ಯಾನ್ಮಾರ್​ ಸೇನಾಪಡೆ ಯೋಧರು ಸಂಯೋಜಿತವಾಗಿ ಈ ದಾಳಿಗಳನ್ನು ಸಂಘಟಿಸಿದ್ದರು ಎನ್ನಲಾಗಿದೆ. ವಿಶೇಷ ಪಡೆಗಳು, ಅಸ್ಸಾಂ ರೈಫಲ್ಸ್​ ಮತ್ತು ಇನ್ಫೆಂಟ್ರ ಘಾತಕ್ಸ್​ ಸೇರಿ ಭಾರತೀಯ ಸೇನಾಪಡೆಯ ಎರಡು ಬೆಟಾಲಿಯನ್​ ಯೋಧರು ಮತ್ತು ಮ್ಯಾನ್ಮಾರ್​ ಸೇನಾಪಡೆಯ ನಾಲ್ಕು ಬ್ರಿಗೇಡ್​ಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದವು.

ಇದಕ್ಕೂ ಮುನ್ನ ಫೆಬ್ರವರಿ 22ರಿಂದ 26ರವರೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದ ಭಾರತ ಮತ್ತು ಮ್ಯಾನ್ಮಾರ್​ ಸೇನಾಪಡೆಗಳು ಸನ್​ಶೈನ್​ 1 ಕಾರ್ಯಾಚರಣೆ ಹೆಸರಿನಲ್ಲಿ ಅರ್ಕನೀಸ್​ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದವು.

ಮ್ಯಾನ್ಮಾರ್​ನ ಗಡಿಯೊಳಗೆ ಇದ್ದ ಎನ್​ಎಸ್​ಸಿಎನ್​-ಕೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನಾಪಡೆ ಯೋಧರು 2015ರಲ್ಲಿ ದಾಳಿ ನಡೆಸಿದ್ದರು. ತನಗೆ ಪೂರ್ವ ಮಾಹಿತಿ ನೀಡದೆ ಏಕಪಕ್ಷೀಯವಾಗಿ ದಾಳಿ ನಡೆಸಿದ್ದರ ಬಗ್ಗೆ ಮ್ಯಾನ್ಮಾರ್​ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಮ್ಯಾನ್ಮಾರ್​ ಸೇನಾಪಡೆ ಜತೆ ಉಗ್ರರ ನೆಲೆಗಳ ಮೇಲೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಭಾರತ ನಿರ್ಧರಿಸಿತ್ತು. ತನ್ನ ಈ ಪ್ರಯತ್ನ ಸಫಲವಾಗಿರುವುದಾಗಿ ಭಾರತ ಹೇಳಿಕೊಂಡಿದೆ.

India and Myanmar forces coordinate to destroy NE insurgent camps across border

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ