ಮೈಸೂರು: ಕೊಡಗು ನೆರೆ ಸಂತ್ರಸ್ತರ ಮನೆಗಳ ಗುಣಮಟ್ಟದ ಬಗ್ಗೆ ಹೇಳಿಕೆ ನೀಡಿದ್ದ ನಟಿ ಹರ್ಷಿಕಾ ಪೂಣಚ್ಚಗೆ ತಿರುಗೇಟು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಹರ್ಷಿಕಾ ಪೂಣಚ್ಚ ಯಾರವರು? ಅವರು ಏನಾಗಿದ್ದಾರೆ? ಸಿನಿಮಾ ನಟಿ ಆದರೆ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಏನು ಗೊತ್ತು? ಅವರ ವಿದ್ಯಾಭ್ಯಾಸ ಹಿನ್ನೆಲೆ ಏನು?. ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ್ದ ನಟಿ ಹರ್ಷಿಕಾ ಪೂಣಚ್ಚ, ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ ಶೀಘ್ರವೇ ಮನೆ ವಿತರಣೆ ಮಾಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ಮನೆ ಹಂಚಿಕೆಯಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.