ಬೆಂಗಳೂರು, ಜೂ.16- ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆಫ್ರಿಕಾ ದೇಶದ 12 ಮಂದಿ ಪ್ರಜೆಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಈಶಾನ್ಯ ವಿಭಾಗದ ಯಲಹಂಕ ಹಾಗೂ ಯಲಹಂಕ ಉಪನಗರದ ಪೊಲೀಸರು ಎಫ್ಆರ್ಆರ್ಒ ಅಧಿಕಾರಿಗಳ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಯಲಹಂಕ ಸುತ್ತಮುತ್ತ ಅಕ್ರಮವಾಗಿ ನೆಲೆಸಿದ್ದ 12 ಮಂದಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ವಿದ್ಯಾರ್ಥಿ, ವ್ಯಾಪಾರಿ ಹಾಗೂ ಪ್ರವಾಸಿ ವೀಸಾದಡಿ ಆರೋಪಿಗಳು ನಗರಕ್ಕೆ ಬಂದು ನೆಲೆಸಿದ್ದರು. ಆದರೆ, ವೀಸಾ ಅವಧಿ ಮುಗಿದಿದ್ದರೂ ವೀಸಾ ಅವಧಿಯನ್ನು ವಿಸ್ತರಿಸಿಕೊಳ್ಳದೆ, ತಮ್ಮ ದೇಶಗಳಿಗೆ ಹಿಂದಿರುಗದೆ ಯಲಹಂಕ ಸುತ್ತಮುತ್ತ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ಬಂಧಿತರಲ್ಲಿ ಯಾವೊಬ್ಬ ಪ್ರಜೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಅವರ ಬಳಿ ಗಾಂಜಾ ಮತ್ತಿತರ ಮಾದಕ ವಸ್ತುಗಳೂ ಪತ್ತೆಯಾಗಿಲ್ಲ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ತಮ್ಮ ದೇಶದಲ್ಲಿ ಬಡತನವಿರುವುದರಿಂದ ಇವರು ವೀಸಾ ಅವಧಿ ಮುಗಿದಿದ್ದರೂ ಉತ್ತಮ ಜೀವನ ನಡೆಸಲು ಇಲ್ಲೇ ಉಳಿದುಕೊಂಡಿದ್ದಾರೆಂದು ಗೊತ್ತಾಗಿದೆ.
ಬಂಧಿತರ ವಿರುದ್ಧ ಪಾಸ್ಪೋರ್ಟ್, ವಿದೇಶಿ ಕಾಯ್ದೆ ಮತ್ತಿತರ ಸೆಕ್ಷನ್ಗಳನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಎಸಿಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.