ಬೆಂಗಳೂರು, ಜೂ.15-ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದ ಬಸ್ ಪಾಸ್‍ಗಳನ್ನು ಜೂ.19ರಿಂದ ವಿತರಿಸಲಿದೆ.
ಕಳೆದ ವರ್ಷದ ದರವನ್ನೇ ಈ ಬಾರಿಯೂ ಮುಂದುವರೆಸಿದ್ದು, ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ಪರಿಷ್ಕರಣೆ ಮಾಡಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಪ್ರಾಥಮಿಕ ಶಾಲಾ ಬಾಲಕರ ಬಸ್ ಪಾಸ್ ದರವನ್ನು 150 ರೂ. ನಿಗದಿಪಡಿಸಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳ ಬಸ್ ಪಾಸ್ ದರ 750ರೂ.ಇದ್ದರೆ ಬಾಲಕಿಯರ ಬಸ್ ಪಾಸ್ ದರ 550ರೂ.ಗೆ ಇಳಿಸಲಾಗಿದೆ.
ಪಿಯುಸಿ, ಪದವಿ, ಡಿಪ್ಲೋಮ ವಿದ್ಯಾರ್ಥಿಗಳ ಪಾಸ್ ದರ 1050 ರೂ. ಗಳಿದ್ದರೆ, ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳ ಪಾಸ್‍ದರ 1550 ರೂ. ಹಾಗೂ ಸಂಜೆ ಕಾಲೇಜು ಹಾಗೂ ಪಿಎಚ್‍ಡಿ ವಿದ್ಯಾರ್ಥಿಗಳ ಬಸ್‍ಪಾಸ್ ದರವನ್ನು 1350 ರೂ.ಗೆ ನಿಗದಿಪಡಿಸಲಾಗಿದೆ.
ಪ್ರಾಥಮಿಕ ಶಾಲೆಯಿಂದ ಪಿಎಚ್‍ಡಿ ವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 150 ರೂ. ಪಾಸ್ ದರ ನಿಗದಿಪಡಿಸಲಾಗಿದೆ. ಈ ಎಲ್ಲಾ ಹಂತದ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ಮಾತ್ರ ಪಾಸ್ ನೀಡಲಾಗುತ್ತದೆ. ಆದರೆ ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳ ಅವಧಿಗೆ ಪಾಸ್ ನೀಡಲಿದ್ದು, ಸಾಮಾನ್ಯ ವರ್ಗದವರಿಗೆ 1310 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 160 ರೂ. ನಿಗದಿಪಡಿಸಲಾಗಿದೆ.
ಪಾಸ್‍ನ ದರದಲ್ಲಿ ಪ್ರತಿ ತಿಂಗಳಿಗೆ 5 ರೂ.ನಂತೆ ಅಪಘಾತ ಪರಿಹಾರ ನಿಧಿಗೆ ಹಾಗೂ 100 ರೂ. ಸಂಸ್ಕರಣಾ ಶುಲ್ಕವೂ ಒಳಗೊಂಡಿದೆ ಎಂದು ನಿಗಮ ಸ್ಪಷ್ಟಪಡಿಸಿದೆ.
ಪ್ರಸಕ್ತ ವರ್ಷದಿಂದ ಆನ್‍ಲೈನ್‍ನಲ್ಲಿ ವಿದ್ಯಾರ್ಥಿಗಳು ಪಾಸ್ ಪಡೆಯಲು ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಮುದ್ರಿತ ಅರ್ಜಿಯನ್ನು ಆಯಾ ಶಾಲಾಕಾಲೇಜುಗಳ ಮುಖ್ಯಸ್ಥರಿಂದ ದೃಢೀಕರಿಸಿ ಬಸ್‍ಪಾಸ್‍ನ ಶುಲ್ಕ ಪಾವತಿಸಿ ಪಾಸ್ ಪಡೆಯಬಹುದಾಗಿದೆ.
ಆನ್‍ಲೈನ್ ವ್ಯವಸ್ಥೆ ಲಭ್ಯವಿಲ್ಲದ ವಿದ್ಯಾರ್ಥಿಗಳಿಗಾಗಿ ಹಳೆಯ ಮ್ಯಾನ್ಯುವಲ್ ಅರ್ಜಿಗಳನ್ನೇ ಸಲ್ಲಿಸಿ ಬಸ್ ಪಾಸ್‍ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದ ಪ್ರಮುಖ ಬಸ್ ನಿಲ್ದಾಣ ಹಾಗೂ ನಿಗಮದ ವೆಬ್‍ಸೈಟ್‍ನಲ್ಲಿ ಅರ್ಜಿಗಳು ದೊರೆಯಲಿವೆ. ಜೂ.30ರವರೆಗೂ ಶಾಲಾ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಿಗಮ ಸ್ಪಷ್ಟಪಡಿಸಿದೆ.