ಬೆಂಗಳೂರು, ಜೂ.15- ಸಾವಿರಾರು ಮಂದಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಒತ್ತಾಯ ಮಾಡಬೇಕೆಂದು ಮುಸ್ಲಿಂ ನಿಯೋಗ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಜೀಂ ನೇತೃತ್ವದ ಮುಸ್ಲಿಂ ನಿಯೋಗ ಆನಂದ್ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತಿರುವ ಯಡಿಯೂರಪ್ಪನವರನ್ನು ಭೇಟಿ ಮಾಡಿ ಇದೊಂದು ಅಂತಾರಾಜ್ಯ ಹಗರಣವಾಗಿರುವುದರಿಂದ ಸಿಬಿಐಗೆ ವಹಿಸಲು ಪ್ರಧಾನಿಗೆ ಮನವಿ ಮಾಡುವಂತೆ ಪತ್ರದಲ್ಲಿ ಕೋರಿದೆ.
ಸುಮಾರು 100ಕ್ಕೂ ಹೆಚ್ಚು ಮುಸ್ಲಿಂ ನಿಯೋಗದವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಯಾವ ರೀತಿ ಐಎಂಎಯಲ್ಲಿ ವಂಚನೆಯಾಗಿದೆ, ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಮನವಿ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ ಇದು ಬೃಹತ್ ಹಗರಣವಾಗಿದೆ.
ಸಾವಿರಾರು ಜನರಿಗೆ ಬಡ್ಡಿ ಆಮಿಷ ತೋರಿಸಿದ್ದ ಐಎಂಎ ಸಂಸ್ಥೆ ಮಾಲೀಕ ಮೊಹಮ್ಮದ್ ಮನ್ಸೂರ್ ಯಾರೊಬ್ಬರಿಗೂ ಹಣ ನೀಡದೆ ವಿದೇಶಕ್ಕೆ ಪರಾರಿಯಾಗಿದ್ದಾನೆ. ಈತ ಎಲ್ಲೆ ಅಡಗಿದ್ದರೂ ಕರ್ನಾಟಕಕ್ಕೆ ಹಿಡಿದು ತಂದು ನಿಮ್ಮೆಲರ ಹಣವನ್ನು ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಆಶ್ವಾಸನೆ ನೀಡಿದರು.
ಆತ ದುಬೈನಲ್ಲೇ ಇರಲಿ, ಇನ್ನೆಲ್ಲೇ ಇರಲಿ ಪತ್ತೆ ಹಚ್ಚಿ ಆತನ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಂಡು ನಿಮ್ಮ ಹಣವನ್ನು ಹಿಂದಿರುಗಿಸಲಿದ್ದೇವೆ. ಯಾರೊಬ್ಬರು ಆತಂಕಕ್ಕೆ ಒಳಗಾಗಬಾರದು. ಸಹನೆಯಿಂದ ಇರಿ ಎಂದು ಮನವಿ ಮಾಡಿದರು.
ಶೀಘ್ರದಲ್ಲೇ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಐಎಂಎ ಸಂಸ್ಥೆಯ ವಂಚನೆ ಮಾಹಿತಿಯನ್ನು ನೀಡಲಿದ್ದೇವೆ. ಸಿಬಿಐ ತನಿಖೆಯಿಂದ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.
ಎಸ್ಐಟಿಯಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಇಲ್ಲ. ಇದೊಂದು ಅಂತಾರಾಜ್ಯ ಹಗರಣವಾಗಿದ್ದು, ಬೇರೆ ಬೇರೆ ರಾಜ್ಯವಲ್ಲದೆ ವಿದೇಶಗಳಲ್ಲಿ ಹಣ ಹೂಡಿಕೆಯಾಗಿದೆ. ಎಸ್ಐಟಿ ತನಗೆ ಬೇಕಾದವರನ್ನು ರಕ್ಷಣೆ ಮಾಡಿ ರಾಜಕೀಯ ಎದುರಾಳಿಗಳನ್ನು ಕಟ್ಟಿಹಾಕಲಿದೆ. ಸಿಬಿಐನಿಂದ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ ಎಂದರು.
ರಾಜ್ಯ ಸರ್ಕಾರವೇ ಇದರಲ್ಲಿ ನೇರವಾಗಿ ಶಾಮೀಲಾಗಿದೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಹಮ್ಮದ್ ಮನ್ಸೂರ್ ಅಲಿಖಾನ್ ಎರಡೂ ಪಕ್ಷಗಳಿಗೆ ಹಣ ಹಂಚಿಕೆ ಮಾಡಿದ್ದಾನೆ. ರಾಜ್ಯ ಸರ್ಕಾರವೇ ಆತನನ್ನು ವಿದೇಶಕ್ಕೆ ಕಳುಹಿಸಿದೆ ಎಂದು ದೂರಿದರು.
ನಿಯೋಗ ದ ನೇತೃತ್ವ ವಹಿಸಿದ್ದ ಅಬ್ದುಲ್ ಅಜೀಂ ಮಾತನಾಡಿ, ಹಗರಣದಲ್ಲಿ ಸಚಿವ ಜಮೀರ್ ಅಹಮ್ಮದ್ ಮತ್ತು ಶಿವಾಜಿನಗರದ ಶಾಸಕ ರೋಷನ್ ಬೇಗ್ ನೇರವಾಗಿ ಶಾಮೀಲಾಗಿದ್ದಾರೆ. ಮೊದಲು ಎಸ್ಐಟಿ ಈ ಇಬ್ಬರನ್ನು ಬಂಧಿಸಿದರೆ, ಎಲ್ಲಾ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದರು.
ಐಎಂಎ ಮಾಲೀಕರ ಜತೆ ಜಮೀರ್ ಅಹಮ್ಮದ್ ಮತ್ತು ರೋಷನ್ ಬೇಗ್ ಕುಳಿತು ಬಿರಿಯಾನಿ ತಿನ್ನುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು.
ಐಎಂಎನಿಂದ ಜಮೀರ್ ಅಹಮ್ಮದ್, ರೋಷನ್ ಬೇಗ್ ಸೇರಿದಂತೆ ಇನ್ನೂ ಅನೇಕರು ಹಣ ಪಡೆದಿದ್ದಾರೆ. ಈಗ ನಾನು ಏನೂ ಮಾಡೇ ಇಲ್ಲ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದೊಂದು ಅಂತಾರಾಷ್ಟ್ರೀಯ ವಂಚನೆಯಾಗಿರುವುದರಿಂದ ಸಿಬಿಐ ತನಿಖೆಯಾಗಲೇಬೇಕು ಎಂದು ಆಗ್ರಹಿಸಿದರು.
ಇದೊಂದು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಕೇಂದ್ರ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ನೊಂದವರಿಗೆ ಕೇಂದ್ರ ಪರಿಹಾರ ನೀಡಲಿ ಎಂದು ಅಬ್ದುಲ್ ಅಜೀಂ ಮನವಿ ಮಾಡಿದರು.