![Sidd_revanna](http://kannada.vartamitra.com/wp-content/uploads/2019/06/Sidd_revanna-572x381.jpg)
ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಗಾದಿಗಾಗಿ ಇದೀಗ ಮತ್ತೆ ದೋಸ್ತಿಗಳ ಕಾಳಗ ಶುರುವಾಗಿದೆ. ಅಧ್ಯಕ್ಷ ಪಟ್ಟ ತನಗೆ ಬೇಕು ಎಂದು ಸಚಿವ ರೇವಣ್ಣ ಪಟ್ಟು ಹಿಡಿದಿದ್ದರೆ, ತಮಗಾಗಲೇ ಸಚಿವ ಸ್ಥಾನವಿದೆ. ಹೀಗಾಗಿ ಈ ಸ್ಥಾನ ತಮಗೆ ಇರಲಿ ಎಂದು ರೇವಣ್ಣ ಆಪ್ತ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಕೈ ನಾಯಕರು ಜಿದ್ದಿಗೆ ಬಿದ್ದಿದ್ದಾರೆ.
ಈ ಮೊದಲಿನಿಂದಲೂ ಸ್ನೇಹಿತರಾಗಿರುವ ರೇವಣ್ಣ ಮತ್ತು ಸಿದ್ದರಾಮಯ್ಯ ನಡುವೆ ಈ ವಿಚಾರವಾಗಿ ಭಿನ್ನಮತ ಆರಂಭವಾಗಿದೆ. ಆಪರೇಷನ್ ಕಮಲ ತಪ್ಪಿಸಲು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಡಬೇಕು. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಶಾಸಕ ಭೀಮಾನಾಯ್ಕ್ಗೆ ಬಿಜೆಪಿ ಸೇರುವ ಸನಿಹದಲ್ಲಿದ್ದಾರೆ. ಅವರು ಪಕ್ಷ ಬಿಡದಂತೆ ಮನವೊಲಿಸಿದ್ದೇವೆ. ಇದೀಗ ಅವರಿಗೆ ಸರಿಯಾದ ಸ್ಥಾನಮಾನ ನೀಡದಿದ್ದರೆ ಮತ್ತೆ ಬಿಜೆಪಿ ಸೇರಲು ಮುಂದಾಗಬಹುದು. ಹೀಗಾಗಿ ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಪಟ್ಟುಹಿಡಿದಿದ್ದಾರೆ.
ಎಚ್.ಡಿ.ರೇವಣ್ಣ ಈಗ ಲೋಕೋಪಯೋಗಿ ಸಚಿವರಾಗಿಲ್ಲವೇ? ಅವರಿಗೆ ಕೆಎಂಎಫ್ ಅಧ್ಯಕ್ಷ ಹುದ್ದೆಯೂ ಬೇಕು ಅಂದ್ರೆ ಹೇಗೆ? ಅಧ್ಯಕ್ಷ ಸ್ಥಾನ ನಮಗೆ ಬೇಕೆಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.
ಪ್ರಸ್ತುತ ಬಳ್ಳಾರಿ ಹಾಲು ಒಕ್ಕೂಟ ನಿರ್ದೇಶಕರಾದ ಭೀಮಾನಾಯ್ಕ್ ಅವರಿಗೆ ಕೆಎಂಎಫ್ ಪಟ್ಟ ಕಟ್ಟಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಆದರೆ, ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂದು ಕರೆಸಿಕೊಳ್ಳುವ ರೇವಣ್ಣ ಅವರು ಈ ಸ್ಥಾನವನ್ನು ಬಿಟ್ಟುಕೊಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.