ಬೆಂಗಳೂರು, ಜೂ.15-ಸಚಿವ ಸ್ಥಾನ ಸೇರಿದಂತೆ ಸೂಕ್ತ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ಸ್ವಯಂಪ್ರೇರಿತರಾಗಿ ಮುಂದೆ ಬಂದರೆ ಮಾತ್ರ ಸರ್ಕಾರ ರಚಿಸುವ ಬಗ್ಗೆ ಗಮನಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ನಿನ್ನೆಯಷ್ಟೆ ವಿಸ್ತರಣೆಯಾದ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಕೆಲವು ಶಾಸಕರು ಅಸಮಾಧಾನಗೊಂಡಿರುವ ಬೆನ್ನಲ್ಲೇ ಯಡಿಯೂರಪ್ಪನವರ ಈ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಯಾವುದೇ ಕಾರಣಕ್ಕೂ ನಾವು ಈ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಎರಡು ಪಕ್ಷಗಳ ಮುಖಂಡರೇ ಹಾದಿಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿರುವಾಗ ನಾವೇಕೆ ಆ ಪ್ರಯತ್ನವನ್ನು ಮಾಡಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್-ಜೆಡಿಎಸ್‍ನಲ್ಲಿ ಸುಮಾರು 20ಕ್ಕೂ ಹೆಚ್ಚು ಶಾಸಕರು ಅಸಮಾಧಾನಗೊಂಡಿದ್ದು, ಯಾವ ಸಂದರ್ಭದಲ್ಲಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಯಾರೊಬ್ಬರಿಗೂ ತಿಳಿದಿಲ್ಲ. ಹೀಗಾಗಿ ಈ ಸರ್ಕಾರ ಸುಭದ್ರವಾಗಿದೆ ಎಂದು ನಾನು ಹೇಳುವುದಿಲ್ಲ. ಅಸ್ಥಿರತೆ ಯಾವಾಗಲೂ ಕಾಡುತ್ತಲೇ ಇದೆ ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದ ವಿರುದ್ಧ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಅವರೆಲ್ಲರೂ ಸೂಕ್ತವಾದ ಸಂದರ್ಭ ಮತ್ತು ಸಮಯಕ್ಕಾಗಿ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸರ್ಕಾರ ಏನಾಗುತ್ತದೆ ಎಂಬುದರ ಬಗ್ಗೆ ಯಾರಿಗೂ ಖಚಿತತೆ ಇಲ್ಲ ಎಂದು ಹೇಳಿದರು.
ಜಿಂದಾಲ್ ಕಂಪನಿಗೆ ಜಮೀನು ಪರಭಾರೆ ಮಾಡುವ ಸಂಬಂಧ ಸಂಪುಟ ಉಪಸಮಿತಿ ರಚಿಸಿರುವುದು ಕೇವಲ ಕಣ್ಣೊರೆಸುವ ತಂತ್ರ. ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಸಂಪೂರ್ಣವಾಗಿ ಹಿಂಪಡೆಯುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಮೀನು ಪರಭಾರೆ ಮಾಡಿರುವುದರಲ್ಲಿ ಅನೇಕ ಮಂದಿಗೆ ದೊಡ್ಡ ಮಟ್ಟದ ಕಿಕ್‍ಬ್ಯಾಕ್ ನಡೆದಿದೆ. ಹೀಗಾಗಿಯೇ ಸರ್ಕಾರ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯವನ್ನು ಹಿಂಪಡೆಯಲು ಮೀನಾಮೇಷ ಎಣಿಸುತ್ತಿದೆ. ನಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಈ ಸರ್ಕಾರದಲ್ಲಿಯಾವುದೂ ಸರಿ ಇಲ್ಲ ಎಂಬುದಕ್ಕೆ ನಿನ್ನೆಯಷ್ಟೆ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸಾಕ್ಷಿ.ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಸ್ವತಃ ವಿಶ್ವನಾಥ್ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಈಗ ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆಗಳ ಪರ್ವ ಆರಂಭವಾಗಿದೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.
ಐಎಂಎ ಹಗರಣದಲ್ಲಿ ದೋಸ್ತಿ ಪಕ್ಷಗಳ ಅನೇಕ ಮುಖಂಡರು ನೇರವಾಗಿ ಶಾಮೀಲಾಗಿದ್ದಾರೆ. ಈ ಪ್ರಕರಣದಲ್ಲಿ ರೋಷನ್‍ಬೇಗ್ ಇರಲಿ, ಇಲ್ಲವೆ ಜಮೀರ್ ಅಹಮ್ಮದ್ ಖಾನ್ ಇರಲಿ ಹಣ ಹೂಡಿಕೆ ಮಾಡಿ ಕಂಗಾಲಾಗಿರುವ ಜನರಿಗೆ ಅವರು ಹೂಡಿಕೆ ಮಾಡಿರುವ ಹಣ ವಾಪಸ್ ಕೊಡಿಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದೇ ಸೂಕ್ತ ಎಂದು ತಿಳಿಸಿದರು.
ಸಿಬಿಐನಿಂದ ಮಾತ್ರ ಸತ್ಯಾಂಶ ಹೊರಬರಲಿದೆ. ಎಸ್‍ಐಟಿ ಕೇವಲ ಕಣ್ಣೊರೆಸುವ ತಂತ್ರ.ತಮಗೆ ಬೇಕಾದವರನ್ನು ರಕ್ಷಣೆ ಮಾಡಿ ಎದುರಾಳಿಗಳನ್ನು ಹಣಿಯುವ ಷಡ್ಯಂತ್ರ ಇದರಲ್ಲಿ ಅಡಗಿರುವ ಸಾಧ್ಯತೆ ಇದೆ. ಸಿಬಿಐಗೆ ವಹಿಸಲು ಸರ್ಕಾರಕ್ಕೆ ಇರುವ ಆತಂಕವಾದರೂ ಏನು ಎಂದು ಪ್ರಶ್ನಿಸಿದರು.
ನಾಳೆ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಸೇರಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನಿಸಿದೆ.